ಕಳೆದ ಬಾರಿಯ ಕನ್ನಡ ಬಿಗ್ ಬಾಸ್ ಸೀಸನ್ 10 ಎಲ್ಲೆಲ್ಲೂ ವಿವಾದಗಳಿಂದಲೇ ಸುದ್ದಿಯಾಗಿದ್ದು ಗೊತ್ತೇ ಇದೆ. ಸೀಸನ್ ನಲ್ಲಿ ಕಾರ್ತಿಕ್ ವಿನ್ ಆದರೆ, ವಿನಯ್ ಮತ್ತು ಸಂಗೀತಾ ಅವರಂತಹ ಸ್ಫರ್ಧಿಗಳು ತಮ್ಮ ವಿವಾದಗಳಿಂದಲೇ ಸುದ್ದಿಯಾಗಿದ್ದರು. ಹೊಡೆದಾಟ, ಗಲಾಟೆ, ಜಗಳ, ಪರಸ್ಪರ ಕೆಸರೆರಚಾಟ ಹಾಗೂ ಹೆಣ್ಣುಮಕ್ಕಳ ಬಳೆಯ ವಿಚಾರದಲ್ಲಿ ಎಲ್ಲರ ಕಣ್ಣುಕುಕ್ಕಿದ್ದ ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ಅಂತ್ಯ ಕಂಡಂತೆ, ಈ ಬಾರಿ ಬಿಗ್ ಬಾಸ್ ಸೀಸನ್ 11 ರ ಪ್ರೋಮೋ ಸಮಯ ಹತ್ತಿರ ಬಂದಿದೆ. ಆದರೆ, ಈ ಬಾರಿಯ ಬಿಗ್ ಬಾಸ್ ಪ್ರೋಮೋಗೂ ಮುನ್ನ ಕಲರ್ಸ್ ಕನ್ನಡ ವಾಹಿನಿ ಎಲ್ಲಾ ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಹೌದು. ಕಳೆದ 10 ಸೀಸನ್ಗಳಲ್ಲಿಯೂ ಕೂಡ, ಬಿಗ್ ಬಾಸ್ ನೋಡುತ್ತಿದ್ದ ಎಲ್ಲರೂ ಕಾಯುತ್ತಿದ್ದದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಕಿಚ್ಚ ಸುದೀಪ (Kichha Sudeepa) ಅವರು ನಡೆಸಿಕೊಡುತ್ತಿದ್ದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನೋಡಲು ಎನ್ನಬಹುದು. ಕಿಚ್ಚನ ಅದೆಷ್ಟೋ ಅಭಿಮಾನಿಗಳು, ಕಿಚ್ಚ ಈ ವಾರ ಯಾವ ಡ್ರೆಸ್ ಹಾಕುತ್ತಾರೆ, ಯಾವ ಸ್ಫರ್ಧಿಯನ್ನು ಎಲಿಮಿನೇಟ್ ಮಾಡುತ್ತಾರೆ ಹಾಗೂ ಸ್ಫರ್ಧಿಗಳಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವುದನ್ನೇ ನೋಡಲು ಕಾದು ಕುಳಿತುಕೊಳ್ಳುತ್ತಿದ್ದರು.
ಆದರೆ ಕೆಲವರು ಈ ಬಾರಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚ ಈ ಬಾರಿಯ ಬಿಗ್ ಬಾಸ್ ಸೀಸನ್ ನಡೆಸಿಕೊಡುವುದು ಡೌಟ್ ಎಂದು ವದಂತಿಗಳನ್ನು ಹಬ್ಬಿಸಿದ್ದರು. ಆದರೆ ಕಲರ್ಸ್ ಕನ್ನಡದ ಕೆಲವು ಮೂಲಗಳು ಅವೆಲ್ಲವೂ ಸುಳ್ಳು ಸುದ್ದಿ ಎಂದು ಬಿಂಬಿಸಿದ್ದವು. ಆದರೆ, ಇದೀಗ ಕಲರ್ಸ್ ಕನ್ನಡ ತನ್ನ ಪ್ರೋಮೋದಿಂದ ಕಿಚ್ಚ ಸುದೀಪ ಅವರ ಫೋಟೊ ಮತ್ತು ಹ್ಯಾಷ್ ಟ್ಯಾಗ್ನ್ನು ತೆಗೆದುಹಾಕುವ ಮೂಲಕ ಹಲವಾರು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
Bigg Boss Kannada: ಪ್ರೋಮೋದಲ್ಲಿ ಕಿಚ್ಚನನ್ನು ತೆಗೆದ ಕಲರ್ಸ್ ಕನ್ನಡ
ಹೌದು. ವಾರದ ಹಿಂದೆ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಿಗ್ ಬಾಸ್ ಸೀಸನ್ 11 (Bigg Boss Kannada Season 11) ರ ಪ್ರೋಮೋದ ಬಗ್ಗೆ ಪೋಸ್ಟ್ ಮಾಡಿದ್ದ ಕಲರ್ಸ್ ಕನ್ನಡ ವಾಹಿನಿ, ತನ್ನ ಬಿಗ್ ಬಾಸ್ ಪ್ರೋಮೋ ಪೋಸ್ಟರ್ನಲ್ಲಿ ಕೇವಲ ಕಣ್ಣಿನ ಚಿತ್ರವನ್ನಷ್ಟೇ ಇಟ್ಟು, ಸುದೀಪ್ ಅವರ ಚಿತ್ರವನ್ನು ತೆಗೆದಿದೆ. ಅಷ್ಟೇ ಅಲ್ಲದೇ, ಸುದೀಪ್ ಅವರ ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದ ವಾಹಿನಿ, ನಂತರ ಅದನ್ನು ಎಡಿಟ್ ಮಾಡಿ ತೆಗೆದುಹಾಕುವ ಮೂಲಕ ಕಿಚ್ಚನ ಹಲವಾರು ಅಭಿಮಾನಿಗಳು ಹಾಗೂ ಬಿಗ್ ಬಾಸ್ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರಚಿದೆ.
ಕಿಚ್ಚನಿಲ್ಲದ ಬಿಗ್ ಬಾಸ್ ಪ್ರೋಮೋ ಪೋಸ್ಟ್ಗೆ 2 ಲಕ್ಷ ವೀಕ್ಷಣೆ
ಈಗಾಗಲೇ ಆ ಪೋಸ್ಟ್ಗೆ 2 ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಬಂದಿದ್ದು, ಇದೀಗ ಕಿಚ್ಚನ ಹ್ಯಾಷ್ ಟ್ಯಾಗ್ ತೆಗೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ತಮಿಳು ಬಿಗ್ ಬಾಸ್ನಲ್ಲಿ ಈ ಬಾರಿಯ ಹೋಸ್ಟಿಂಗ್ನಿಂದ ಕಮಲ್ ಹಾಸನ್ (Kamala Hasan) ಅವರು ಹೊರಗೆ ಬಂದಿದ್ದು, ಅವರ ಸ್ಥಾನಕ್ಕೆ ವಿಜಯ್ ಸೇತುಪತಿ (Vijay Setupathi) ಅವರು ಆಗಮಿಸಿದ್ದಾರೆ. ಹಾಗೆಯೇ, ಕನ್ನಡ ಬಿಗ್ ಬಾಸ್ನಲ್ಲಿ ಇದೇ ಊಹಾಪೋಹಗಳು ನಿಜವಾದರೆ, ಸುದೀಪ್ ಅವರ ಸ್ಥಾನವನ್ನು ತುಂಬುವ ಹೋಸ್ಟ್ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಆದರೆ, ಕನ್ನಡದ ಬಿಗ್ ಬಾಸ್ ಕಿಚ್ಚನಿಲ್ಲದಿದ್ದರೆ ಖಂಡಿತಾ ಡಲ್ ಹೊಡೆಯುತ್ತದೆ ಎನ್ನುತ್ತಿರುವ ಕಿಚ್ಚನ ಫ್ಯಾನ್ಸ್, ಈ ಬಾರಿ ಬಿಗ್ ಬಾಸ್ನ್ನು ಕಿಚ್ಚ ಸುದೀಪ ಅವರೇ ನಡೆಸಿಕೊಡುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.