ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಊಹಿಸಲಾಗದ ಸತ್ಯಾಸತ್ಯತೆಗಳನ್ನು ಸಾಮಾನ್ಯ ಜನರು ಊಹಿಸಿಬಿಡುತ್ತಾರೆ ಎಂಬುದ್ದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಡಿವೋರ್ಸ್ (Jayam Ravi Divorce) ಘಟನೆಗಳೇ ಪ್ರತ್ಯೇಕ್ಷ ಸಾಕ್ಷಿ ಎಂದೆನ್ನಬಹುದು.
ಹೌದು, ಸೆಲೆಬ್ರಿಟಿಗಳು ತಮ್ಮ ನೈಜ್ಯ ಜೀವನದಲ್ಲಿ ಡಿವೋರ್ಸ್ ಆದ ಕೂಡಲೇ ಅವರ ಅಫೀಶಿಯಲ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಗಾತಿ ಜೊತೆಗಿನ ಫೋಟೋವನ್ನು ಡಿಲೀಟ್ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅತ್ತ ಫೋಟೋ ಡಿಲಿಟ್ ಆಗುತ್ತಿದ್ದ ಹಾಗೆ, ಇತ್ತ ಕಡೆ ಸಾಮಾನ್ಯ ಜನರು ವಿಚ್ಛೇದನದ ಕುರಿತು ಕಮೆಂಟ್ಗಳನ್ನು ಹಾಕಲಾರಂಭಿಸುತ್ತಾರೆ.
ಅಂದಹಾಗೆ, ಆರತಿ ಅವರು ಕೂಡ ತಮ್ಮ ಜೀವನ ಸಂಗಾತಿಯಾದ ಜಯಂ ರವಿ (Jayam Ravi) ಅವರೊಂದಿಗಿನ ಫೋಟೋವನ್ನು ಡಿಲೀಟ್ ಮಾಡುತ್ತಿದ್ದಂತೆಯೇ, ಜನರು ಕೂಡ ವಿಚ್ಛೇದನದ ಕುರಿತು ಅನುಮಾನ ಹೊರಹಾಕಿದ್ದು, ಅದೀಗ ಸತ್ಯವಾಗಿದೆ.
ಹೌದು! ತಮಿಳಿನ ಖ್ಯಾತ ನಟ ಜಯಂ ರವಿ ಅವರು ತಮ್ಮ ಪತ್ನಿ ಆರತಿ ಜೊತೆಗಿನ 15 ವರ್ಷಗಳ ಸಂಸಾರ ಜೀವನಕ್ಕೆ ಅಂತ್ಯ ಹಾಡಿದ್ದು, ಡಿವೋರ್ಸ್ ಪಡೆದುಕೊಂಡಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಹೇಳಿಕೊಳ್ಳುವಂತಹ ಬಿರುಕುಗಳೇನು ಸಮಾಜದ ಕಣ್ಣಿಗೆ ಕಂಡಿರಲಿಲ್ಲ. ಇಬ್ಬರು ಗಂಡು ಮಕ್ಕಳಿದ್ದು ತುಂಬಾ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಸದ್ಯದಲ್ಲಿ ಈ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.
Jayam Ravi Divorce: ತಮ್ಮ ಎಕ್ಸ್ ಖಾತೆಯಲ್ಲಿ ಜಯಂ ರವಿ ಹೇಳಿದ್ದೇನು?
‘ಹಲವು ಅಧ್ಯಾಯಗಳನ್ನು ಹೊಂದಿದ ಪಯಣವೇ ಈ ಜೀವನ. ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಅಧ್ಯಾಯಕ್ಕೂ ಅದರದ್ದೇ ಆದ ಅವಕಾಶ ಮತ್ತು ಸವಾಲುಗಳು ಇರುವುದು ಸರ್ವೇ ಸಾಮಾನ್ಯ. ನನ್ನನ್ನು ಸಿನಿ ತೆರೆ ಮೇಲೆ ಹಾಗೂ ಹಿಂದಿನ ಜೀವನವನ್ನು ಗಮನಿಸುತ್ತಾ ಬಂದಿದ್ದೀರಿ. ನಾನು ಸದಾ ನನ್ನ ಅಭಿಮಾನಿಗಳು ಮತ್ತು ಮಾಧ್ಯಮದವರೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಸದಾ ಪ್ರಯತ್ನಿಸುತ್ತೇನೆ. ಹಾಗೂ ಪಾರದರ್ಶಕವಾಗಿ ನಡೆಸಿಕೊಳ್ಳುತ್ತೇನೆ. ಅಂದ ಹಾಗೆ ಇಂದು ನಾನು ಭಾರವಾದ ಮನಸ್ಸಿನಿಂದ ವೈಯಕ್ತಿಕ ಜೀವನದ ಈ ವಿಷಯ ತಿಳಿಸುತ್ತಿದ್ದೇನೆ’ ಎಂದು ಜಯಂ ರವಿ ಅವರು ತಮ್ಮ ಬರಹ ಆರಂಭಿಸಿದ್ದಾರೆ.
‘ಸಾಕಷ್ಟು ಯೋಚಿಸಿದ ಬಳಿಕ ಆರತಿ ಜೊತೆ ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಇದು ಅವಸರದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಎಲ್ಲರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಕಷ್ಟದ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಬೇಕು ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಯಾವುದೇ ಗಾಸಿಪ್, ವದಂತಿ, ಊಹಾಪೋಹ, ಆರೋಪ ಮಾಡಬೇಡಿ. ಇದು ಖಾಸಗಿಯಾಗಿಯೇ ಇರಲಿ’.
‘ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ನನ್ನ ಮೊದಲ ಆದ್ಯತೆ ಆಗಿರುತ್ತದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿ ಆಗಿರುತ್ತೇನೆ. ನಿಮ್ಮ ಬೆಂಬಲವೇ ನನಗೆ ಸರ್ವಸ್ವ. ಈ ಎಲ್ಲ ವರ್ಷಗಳಲ್ಲಿ ನೀವು ನನಗೆ ನೀಡಿದ ಪ್ರೀತಿಗೆ ಚಿರಋಣಿ. ಅರ್ಥ ಮಾಡಿಕೊಂಡು ಬೆಂಬಲ ಮುಂದುವರಿಸಿದ್ದಕ್ಕೆ ಧನ್ಯವಾದಗಳು’ ಎಂದು ಎಕ್ಸ್ ಖಾತೆ ಮೂಲಕ ತಮ್ಮ ವಿಚ್ಛೇದನವನ್ನು ಬಹಿರಂಗಪಡಿಸಿಕೊಂಡಿದ್ದಾರೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸುದ್ದಿಯಾಗಿದ್ದ ಚಂದನ್ ಶೆಟ್ಟಿ – ನಿವೇದಿತಾ ಗೌಡ, ಯುವ ರಾಜ್ ಕುಮಾರ್ – ಶ್ರೀದೇವಿ ಅವರ ಡಿವೋರ್ಸ್ ಸುದ್ದಿಗಳು ಮರೆತುಹೋಗುವ ಮುನ್ನವೇ ತಮಿಳಿನ ಈ ಖ್ಯಾತ ನಟ ಕೂಡ ಡಿವೋರ್ಸ್ ಪಡೆದಿರುವುದು, ಚಿತ್ರರಂಗದಲ್ಲಿನ ಸಂಬಂಧಗಳ ಬಗ್ಗೆ ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಣ್ಣಪುಟ್ಟ ಕಾರಣಕ್ಕೇ ಡಿವೋರ್ಸ್ ತನಕ ಹೋಗುವ ಈಗಿನ ಪೀಳಿಗೆಯ ದಂಪತಿಗಳಿಗೆ ನಿಜಕ್ಕೂ ಸಂಸಾರ ಹಾಗೂ ಸಂಸ್ಕಾರದ ಪಾಠದ ಅವಶ್ಯಕತೆ ಖಂಡಿತಾ ಇದೆ.