ಈಗಾಗಲೇ ಪ್ರಧಾನಿ ಶ್ರೀ ನರೇಂದ್ರ ಮೋದಿ (Narendra Modi) ಯವರ ಮೂರನೇ ಅವಧಿಯ ಸರ್ಕಾರ ಮೋದಿ 3.0 ದ ಪ್ರಥಮ ಬಜೆಟ್ನ್ನು ಸನ್ಮಾನ್ಯ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ್ದು, ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ಲಾಭ ಇಲ್ಲ ಎನ್ನುವಂತೆ ಅಭಿಪ್ರಾಯ ಕೇಳಿಬಂದದ್ದು ಗೊತ್ತೇ ಇದೆ. ಅದರ ನಡುವೆಯೇ ₹2000 ಮೊತ್ತದ ಪಾವತಿಗಳಿಗೆ, ಪಾವತಿ ಮಧ್ಯವರ್ತಿ ಸಂಸ್ಥೆಗಳು ಅಥವಾ ಅಗ್ರಿಗೇಟರ್ (Aggregator) ಗಳ ಮೇಲೆ 18% ಜಿಎಸ್ಟಿ ಅನ್ವಯವಾಗುತ್ತದೆ ಎನ್ನುವ ಊಹಾಪೋಹಗಳು ಕೆಲ ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಅದೆಲ್ಲವನ್ನೂ ಬದಿಗಿಟ್ಟು ಜಿಎಸ್ಟಿ ಕೌನ್ಸಿಲ್ (GST Council) ದೇಶದ ಜನತೆಗೆ ರಾತ್ರೋರಾತ್ರಿ ಶುಭಸುದ್ದಿ ನೀಡಿದೆ.
ಹೌದು. ನಿನ್ನೆ ನಡೆದ ಜಿಎಸ್ಟಿ ಕೌನ್ಸಿಲ್ ಸಭೆ (GST Council Meeting) ಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೇಂದ್ರ ವಿತ್ತ ಸಚಿವಾಲಯವು (Union Finance Ministry) ಕೈಗೊಂಡಿದ್ದು, ಅದರಲ್ಲಿ ದೇಶದ ಜನತೆ ಖುಷಿಪಡುವಂತೆ ಕೆಲವು ಘೋಷಣೆಗಳನ್ನು ಮಾಡಲಾಗಿದೆ.
ಅತ್ಯಂತ ಅಗತ್ಯತೆಯಿರುವ ವಸ್ತುಗಳ ಬೆಲೆಯನ್ನು ಕೈಗೆಟುಕುವ ದರದಲ್ಲಿ ನೀಡಬೇಕು ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿಬಂದಿದ್ದು, ಅದರಂತೆ ಈ ಬಾರಿ ಜಿಎಸ್ಟಿ ಕೌನ್ಸಿಲ್ (GST Council) ಅತ್ಯಂತ ಮಹತ್ವಪೂರ್ಣ ನಿರ್ಣಯವನ್ನು ಕೈಗೊಂಡಿದೆ.
ಈ ಬಾರಿಯ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅತ್ಯಂತ ಅವಶ್ಯ ವಸ್ತುಗಳಾದ ಕ್ಯಾನ್ಸರ್ ಔಷಧಿಗಳು (Cancer Drugs) ಹಾಗೂ ಖಾದ್ಯಗಳ (Snacks) ಮೇಲಿನ ಜಿಎಸ್ಟಿ ಕಡಿತಗೊಳಿಸಿ, ಅವುಗಳನ್ನು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ನೀಡಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ.
ನಿನ್ನೆ ನಡೆದ ಸುದೀರ್ಘ ಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ನೇತೃತ್ವದಲ್ಲಿ ಈ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಮಧ್ಯಮ ವರ್ಗದ ಜನತೆಗೆ ಅನುಕೂಲವಾಗುವಂತೆ ಸರ್ಕಾರ ಹೆಜ್ಜೆಗಳನ್ನಿಟ್ಟಂತೆ ಕಾಣುತ್ತಿದೆ.
GST Council ಸಭೆಯಲ್ಲಿ ಕೈಗೊಳ್ಳಲಾದ ಜಿಎಸ್ಟಿ ಇಳಿಕೆಯ ನಿರ್ಣಯಗಳು ಹೀಗಿವೆ
– ಅತ್ಯಂತ ಅಗತ್ಯವಿರುವ ಆಯ್ದ ಕ್ಯಾನ್ಸರ್ ಔಷಧಗಳ (Cancer Drugs) ಮೇಲಿನ ಜಿಎಸ್ಟಿ 5% ಗೆ ಇಳಿಕೆ.
– ಖಾದ್ಯಗಳ (Snacks) ಮೇಲಿನ ಜಿಎಸ್ಟಿ ಮೌಲ್ಯ 18% ನಿಂದ 12% ಗೆ ಇಳಿಕೆ.
– ಹೆಲಿಕಾಪ್ಟರ್ ಪ್ರಯಾಣ (Helicopter Travel) ದ ಮೇಲಿನ ಟ್ಯಾಕ್ಸ್ ಮೊತ್ತ 5% ಗೆ ಇಳಿಕೆ.
ಸಂಶೋಧನೆ ಮತ್ತು ಅಭಿವೃದ್ಧಿ (R&D) ವಲಯಕ್ಕೆ ಜಿಎಸ್ಟಿ ವಿನಾಯಿತಿ
ಇಷ್ಟೇ ಅಲ್ಲದೇ, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಆಯೋಜಿಸಲಾಗುವ ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಗಳಿಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಇದರೊಂದಿಗೆ, ಶಿಕ್ಷಣ ಸಂಸ್ಥೆಗಳು ರಾಜ್ಯ ಅಥವಾ ರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಟ್ಯಾಕ್ಸ್ ನಿಯಮಗಳನ್ನು ಅನುಸರಿಸುತ್ತಿದ್ದಲ್ಲಿ ಅಂತಹ ಸಂಸ್ಥೆಗಳ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಟ್ಯಾಕ್ಸ್ ವಿನಾಯಿತಿ (Tax Exemption) ನೀಡಲು ವಿತ್ತ ಇಲಾಖೆ ನಿರ್ಧರಿಸಿದೆ.
ಅಷ್ಟೇ ಅಲ್ಲದೇ, ಜೀವ ವಿಮೆ (LIC) ಗಳಿಗೆ ಜಿಎಸ್ಟಿ ಸ್ಲಾಬ್ ಕಡಿಮೆಗೊಳಿಸಿ, ಸೆಸ್ (CESS) ತೆರಿಗೆಯ ಅವಧಿಯನ್ನು 2026 ಕ್ಕಿಂತಲೂ ನಂತರದ ಅವಧಿಯವರೆಗೆ ಮುಂದೂಡಲು ನಿರ್ಧರಿಸಿದೆ, ಆದರೆ, ಈ ನಿರ್ಧಾರ ಇತರ ಇಲಾಖೆಗಳ ಸಮ್ಮತಿಯ ನಂತರವಷ್ಟೇ ಜಾರಿಗೆ ಬರಲಿದೆ.
ವಾಹನದ ಸೀಟುಗಳು, ರೈಲ್ವೇ ಎ.ಸಿ ಇನ್ನು ದುಬಾರಿ
ಈ ನಡುವೆ ವಾಹನಗಳ ಸೀಟುಗಳು, ರೈಲುಗಳಲ್ಲಿ ಬಳಸಲಾಗುವ ರೂಫ್ ಮೌಂಟೆಡ್ ಪ್ಯಾಕೇಜ್ ಯೂನಿಟ್ ಏರ್ ಕಂಡೀಷನರ್ (Roof Mounted Package Unit Air Conditioner) ಗಳ ಮೇಲಿನ ಜಿಎಸ್ಟಿ ಸ್ಲಾಬ್ನ್ನು 18% ರಿಂದ 28% ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ವಾಹನದ ಸೀಟುಗಳು (Vehicle Seats) ಹಾಗೂ ಎ.ಸಿ (A/C) ದೇಶದಲ್ಲಿ ವಿಧಿಸಲಾಗುವ ಅತಿ ಹೆಚ್ಚು ಟ್ಯಾಕ್ಸ್ ಸ್ಲಾಬ್ ಪಟ್ಟಿಗೆ ಸೇರಿವೆ. ಆದರೆ, ಇಲೆಕ್ಟ್ರಿಕ್ ವಾಹನಗಳು (EV) ಗಳ ಮೇಲೆ ತೆರಿಗೆ ವಿಧಿಸಬೇಕೇ ಬೇಡವೇ ಎನ್ನುವುದನ್ನು ಸರ್ಕಾರ ಇನ್ನಷ್ಟೇ ನಿರ್ಧರಿಸಬೇಕಿದೆ.
ಏನೇ ಆಗಲಿ. ದೇಶದಲ್ಲಿ ಅತ್ಯಂತ ಅಗತ್ಯವಾದ ಕ್ಯಾನ್ಸರ್ ಚಿಕಿತ್ಸೆಗೆ (Cancer Treatment) ಔಷಧಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಕೌನ್ಸಿಲ್ನ ಈ ನಿರ್ಧಾರ ಸ್ವಾಗತಾರ್ಹವಾಗಿದ್ದು, ಎಲ್ಲಾ ವರ್ಗದ ಜನತೆಗೂ ಅನುಕೂಲವಾಗಲಿದೆ ಎನ್ನಬಹುದು.