ಭಾರತದಲ್ಲಿ ಹಿರಿಯ ನಾಗರಿಕರಿಗೆ ಅವರದ್ದೇ ಆದ ಗೌರವವಿದೆ. ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ನಿವೃತ್ತಿಯ ಜೀವನ ಕಳೆಯುವ ಹಿರಿಯ ನಾಗರಿಕರು ಈ ದೇಶದ ಅಮೂಲ್ಯ ಆಸ್ತಿ ಎಂದರೂ ತಪ್ಪಾಗಲಾರದು. ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ (Senior Citizen Health Insurance) ಯಂತಹ ವಿವಿಧ ಸೌಲಭ್ಯಗಳನ್ನು ಸರ್ಕಾರ ಈಗಾಗಲೇ ನೀಡಿದ್ದು, ಅವರ ವಿಶ್ರಾಂತ ಜೀವನಕ್ಕೆ ಅನುಕೂಲವಾಗುವಂತೆ ಕೆಲವು ವ್ಯವಸ್ಥೆಗಳನ್ನು ಕಲ್ಪಿಸಿದೆ.
ಹಿರಿಯ ನಾಗರಿಕರಿಗಾಗಿ ದೇಶದ ಕೆಲವು ರಾಜ್ಯ ಸರ್ಕಾರಗಳು ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದ್ದರೆ, ಅವರಿಗೆ ಆರ್ಥಿಕ ಸದೃಢತೆ ನೀಡುವ ಪಿಂಚಣಿ ಯೋಜನೆಗಳನ್ನು ಕೇಂದ್ರ ಸರ್ಕಾರವೂ ಅನುಷ್ಠಾನಗೊಳಿಸಿದೆ.
ಇದೀಗ ದೇಶದ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ದೇಶದ 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ತಲಾ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ (Senior Citizen Health Insurance) ನೀಡುವ ನಿರ್ಣಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹೌದು. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (AB PM-JAY) ಮೂಲಕ ಆರು ಕೋಟಿ ಹಿರಿಯ ನಾಗರಿಕರಿಗೆ ರೂ. 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆ ನೀಡುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದ್ದು, 4.5 ಕೋಟಿ ಕುಟುಂಬಗಳ 6 ಕೋಟಿಗೂ ಅಧಿಕ ಹಿರಿಯ ನಾಗರಿಕರಿಗೆ ಈ ಸೌಲಭ್ಯ ದೊರಕಲಿದೆ.
ಈ ಯೋಜನೆಗೆ ಯಾರೆಲ್ಲಾ ಹಿರಿಯ ನಾಗರಿಕರು ಅರ್ಹರು?
- 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ಅವರ ಕುಟುಂಬವನ್ನು ಆಧರಿಸಿ ಈ ಯೋಜನೆಯ ಸೌಲಭ್ಯ.
- ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿರುವವರ ಕುಟುಂಬದಲ್ಲಿರುವ ಹಿರಿಯ ನಾಗರಿಕರಿಗೂ ಈ ಯೋಜನೆಯ ಸೌಲಭ್ಯ ದೊರಕಲಿದ್ದು, ₹5 ಲಕ್ಷದವರೆಗಿನ ಆರೋಗ್ಯ ವಿಮೆ ದೊರಕಲಿದೆ.
- ಖಾಸಗಿ ಹಾಗೂ ಇತರ ಆರೋಗ್ಯ ವಿಮೆಗಳನ್ನು ಹೊಂದಿರುವ ಹಿರಿಯ ನಾಗರಿಕರಿಗೂ Senior Citizen Health Insurance ಸೌಲಭ್ಯ.
- ಆದರೆ, ಕೇಂದ್ರ ಸರ್ಕಾರದ ಆರೋಗ್ಯ ವಿಮೆ (CGHS), ಮಾಜಿ ಸೈನಿಕ ಸೇವಾ ಆರೋಗ್ಯ ವಿಮೆ (ECHS), ಆಯುಷ್ಮಾನ್ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ವಿಮೆಗಳನ್ನು ಹೊಂದಿರುವರಿಗೆ ಆಯ್ಕೆಯನ್ನು ನೀಡಲಾಗಿದ್ದು, ಅವರು ಪ್ರಸ್ತುತ ಇರುವ ಸೇವಾ ವಿಮೆ ಅಥವಾ ಆಯುಷ್ಮಾನ್ ಭಾರತ್ ವಿಮೆಯಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಲು ಅವಕಾಶ ನೀಡಲಾಗಿದೆ.
- ಎಲ್ಲಾ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಫಲ ಪಡೆಯಲು ಪ್ರತ್ಯೇಕ ಕಾರ್ಡ್ ನೀಡಲಾಗುತ್ತದೆ.
- ಈಗಾಗಲೇ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯ ಆಯುಷ್ಮಾನ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ನೋಂದಾಯಿತರಾಗಿರುವ 12.34 ಕುಟುಂಬಗಳ 55 ಕೋಟಿ ಫಲಾನುಭವಿಗಳಿಗೆ ತಲಾ 5 ಲಕ್ಷ ರೂ.ಗಳವರೆಗಿನ ಅರೋಗ್ಯ ವಿಮೆ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ.
ಹಿರಿಯ ನಾಗರಿಕರು Senior Citizen Health Insurance ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಸಲ್ಲಿಸಲಿಚ್ಛಿಸುವ ಅರ್ಹ ಹಿರಿಯ ನಾಗರಿಕರು https://abdm.gov.in/ ವೆಬ್ಸೈಟ್ಗೆ ಭೇಟಿ ನೀಡಿ.
- PM-JAY KIOSK ನಲ್ಲಿ ನಿಮ್ಮ ಆಧಾರ್ ಮತ್ತು ವೋಟರ್ ಐಡಿಯನ್ನು ಪ್ರಮಾಣೀಕರಿಸಿಕೊಳ್ಳಿ.
- ನಿಮ್ಮ ಕುಟುಂಬದ ದಾಖಲೆಗಳನ್ನು ಸಲ್ಲಿಸಿ.
- ಅನಂತರ Generate ಆಗುವ ನಿಮ್ಮ ಪ್ರತ್ಯೇಕ ವೈಯುಕ್ತಿಕ AB PM-JAY ಐಡಿಯನ್ನು ಪ್ರಿಂಟ್ ಮಾಡಿ ಪಡೆದುಕೊಳ್ಳಿ.
Senior Citizen Health Insurance ಯೋಜನೆಯಡಿ ದೊರಕುವ ವೈದ್ಯಕೀಯ ಸೌಲಭ್ಯಗಳು ಇಂತಿವೆ:
- ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಮುನ್ನ ಮೂರು ದಿನಗಳವರೆಗಿನ ವೈದ್ಯಕೀಯ ಚಿಕಿತ್ಸೆ
- ಡಯಾಗ್ನೋಸ್ಟಿಕ್ ಪರೀಕ್ಷೆಗಳು ಹಾಗೂ ಲ್ಯಾಬ್ ತಪಾಸಣೆಗಳು, ಹಾಗೂ ಅವಶ್ಯಕತೆಯಿದ್ದಲ್ಲಿ ಇಂಪ್ಲಾಂಟ್
- ತುರ್ತು ಚಿಕಿತ್ಸೆ ಅಥವಾ ಸಾಮಾನ್ಯ ಚಿಕಿತ್ಸೆ
- ಬೆಡ್ ವಸತಿ ಹಾಗೂ ಊಟದ ಖರ್ಚುವೆಚ್ಚ
- ಚಿಕಿತ್ಸೆಯ ಸಮಯದಲ್ಲಾಗಬಹುದಾದ ವೈದ್ಯಕೀಯ ಸಮಸ್ಯೆಗಳು
- ಆಸ್ಪತ್ರೆಗೆ ದಾಖಲಾದ ನಂತರದ, ಹಾಗೂ ಡಿಸ್ಚಾರ್ಜ್ ಆದ ನಂತರದ 15 ದಿನಗಳವರೆಗಿನ ಆರೈಕೆಯ ವೆಚ್ಚ.
ಹಿರಿಯ ನಾಗರಿಕರಿಗೆ ನಿರಂತರವಾಗಿ ತಲೆದೋರುವ ಆರೋಗ್ಯ ಸಮಸ್ಯೆಗಳಿಗೆ ತಗಲುವ ಖರ್ಚುವೆಚ್ಚಗಳನ್ನು ಭರಿಸುವಲ್ಲಿ ಯಾವುದೇ ತೊಂದರೆಯಾಗದಂತೆ, ಸರ್ಕಾರವೇ ಈ ವೈದ್ಯಕೀಯ ವಿಮೆಯ ಮೂಲಕ ಅವರ ಬಹುತೇಕ ಖರ್ಚುವೆಚ್ಚಗಳನ್ನು ಭರಿಸುವ ಯೋಜನೆಗೆ ಹೆಜ್ಜೆಯಿಟ್ಟಿರುವುದು, ದೇಶದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ ಎನ್ನಬಹುದು.