ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ (Bhagyalakshmi Bond) ಪಡೆದ ಯುವತಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. 2006ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ (BS Yadiyurappa) ಕನಸಿನ ಯೋಜನೆಯಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್, ಇಂದು ಬಡ ಕುಟುಂಬಗಳ ಯುವತಿಯರ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆಯ ಖರ್ಚಿಗೆ ಸಹಾಯಕವಾಗಿದೆ.
2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರು ಬಡ ಕುಟುಂಬಗಳ ಬಾಲಕಿಯರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಬಾಲಕಾರ್ಮಿಕರಾಗಿ ದುಡಿಯಬಾರದು. ಅಲ್ಲದೇ, ಅವರ ಮದುವೆಯ ಸಂದರ್ಭದಲ್ಲಿ ಅವರ ಪೋಷಕರ ಸಾಲದ ಸುಳಿಗೆ ಸಿಲುಕದಂತೆ ರಕ್ಷಿಸಲು ಈ ಯೋಜನೆಯನ್ನು ಆರಂಭಿಸಿದ್ದರು. ಆ ಸಮಯದಲ್ಲಿ ಯೋಜನೆಗೆ ಭಾರೀ ಪ್ರಮಾಣದ ಪ್ರಚಾರ ಸಿಕ್ಕಿತ್ತು. ಅಲ್ಲದೇ, ಬಡ ಕುಟುಂಬಗಳ ಪೋಷಕರು ಈ ಯೋಜನೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದರು.
ಇದೀಗ, 2006 ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದ್ದ ಬಾಲಕಿಯರಿಗೆ 2024ಕ್ಕೆ 18 ವರ್ಷ ತುಂಬಲಿದ್ದು, ಬಾಂಡ್ʼನಿಂದ ಹಣ ಪಡೆಯುವ ಅರ್ಹತೆ ಗಳಿಸಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು, ಇಲಾಖೆಯ ವತಿಯಿಂದ ಮೆಚ್ಯುರಿಟಿ ಪಡೆದ ಬಾಂಡ್ʼಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದಷ್ಟು ಶೀಘ್ರವೇ ಬಾಂಡ್ʼನ ಸೌಲಭ್ಯಗಳನ್ನು ಯುವತಿಯರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಅವರ ಮಾಹಿತಿಯಂತೆ 2024ರಲ್ಲಿ 2 ಲಕ್ಷ 30 ಸಾವಿರ ಯುವತಿಯರು ಮೆಚ್ಯುರಿಟಿ ಪಡೆದಿದ್ದಾರೆ. ಇವರೆಲ್ಲರಿಗೂ ಶೀಘ್ರವೇ ಅವರ ಪಾಲಿನ ಹಣವನ್ನು ಅವರ ಖಾತೆಗೆ ಹಾಕಲು ಸರ್ಕಾರ ಸಿದ್ಧತೆ ನಡೆಸಿದೆ.
Bhagyalakshmi Bond ನಿಂದ ಎಷ್ಟು ಹಣ ದೊರಕಲಿದೆ?
ಒಂದು ಕುಟುಂಬ ಇಬ್ಬರು ಯುವತಿಯರಿಗೆ ಈ ಯೋಜನೆಯಡಿ ಬಾಂಡ್ ವಿತರಣೆ ಮಾಡಲಾಘುತ್ತಿತ್ತು. ಅಂದು ಜೀವ ವಿಮಾ ನಿಗಮ (LIC) ಯೊಂದಿಗೆ ಒಡಗೂಡಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಕುಟುಂಬದ ಮೊದಲ ಬಾಲಕಿ ಬಾಂಡ್ʼಗೆ ರಾಜ್ಯ ಸರ್ಕಾರ 19,300 ರೂ.ಗಳನ್ನು ಹಾಗೂ ಎರಡನೇ ಬಾಲಕಿಗೆ 18,350 ರೂ.ಗಳನ್ನು ಸರ್ಕಾರ ಠೇವಣಿಯಾಗಿ ಇಟ್ಟಿತ್ತು. 18 ವರ್ಷದ ನಂತರ ಈ ಹಣ ಮೆಚ್ಯುರಿಟಿ ಪಡೆದು ಕುಟುಂಬದ ಮೊದಲ ಬಾಲಕಿಗೆ 1 ಲಕ್ಷದ 97 ಸಾವಿರ ರೂ ಹಾಗೂ ಎರಡನೇ ಬಾಲಕಿಗೆ 1 ಲಕ್ಷ 52 ಸಾವಿರ ರೂ. ದೊರೆಯಲಿದೆ.
ಯುವತಿಯರು 18 ವರ್ಷದ ತರುವಾಯ ಶಿಕ್ಷಣಕ್ಕೆ ಅಥವಾ 21 ವರ್ಷಕ್ಕೆ ಮದುವೆಗೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಈ ಬಾಂಡ್ ಮೆಚ್ಯುರಿಟಿ ಪಡೆಯಲು ಯುವತಿಯರು ಕಡ್ಡಾಯವಾಗಿ 8ನೇ ತರಗತಿಯವರೆಗೆ ಶಾಲಾ ಶಿಕ್ಷಣ ಪಡೆದಿರಬೇಕು.
ಭಾಗ್ಯಲಕ್ಷ್ಮಿ ಬಾಂಡ್ ಬಗೆಗಿನ ಅಂಕಿ-ಸಂಖ್ಯೆಗಳು :
ಸರ್ಕಾರದ ಮಾಹಿತಿಯ ಪ್ರಕಾರ, ಭಾಗ್ಯಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 34 ಲಕ್ಷ 50 ಸಾವಿರ ಹೆಣ್ಣುಮಕ್ಕಳಿಗೆ ಬಾಂಡ್ ವಿತರಣೆ ಮಾಡಲಾಗಿದೆ. ಇದರಲ್ಲಿ 4 ಲಕ್ಷದ 30 ಸಾವಿರ ಬಾಂಡ್ʼಗಳನ್ನು ಭಾಗ್ಯಲಕ್ಷ್ಮಿ ಸುಕನ್ಯಾ ಯೋಜನೆಯಡಿ ನೀಡಲಾಗಿದೆ.
ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಹೊಂದಿರುವ 18 ವರ್ಷದ ಯುವತಿಯರು ತಮ್ಮ ಪೋಷಕರೊಂದಿಗೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ, ಮೆಚ್ಯುರಿಟಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಶೀಘ್ರವೇ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಅರ್ಹ ಫಲಾನುಭವಿ ಯುವತಿಯರಿಗೆ ಭಾಗ್ಯಲಕ್ಷ್ಮಿ ಯೋಜನೆಯ ಲಾಭ ವಿತರಣೆ ಮಾಡುವ ಸಿದ್ಧತೆಯಲ್ಲಿ ತೊಡಗಿದೆ.