ಹಳೆಯ ಪಿಂಚಣಿ ಯೋಜನೆ (Old Pension Scheme – OPS). ಈ ಒಂದು ಪದವೇ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಲ್ಲಿ ನಿರೀಕ್ಷೆ, ಆತಂಕ ಮತ್ತು ಕುತೂಹಲವನ್ನು ಹುಟ್ಟಿಸುತ್ತದೆ. ಇತ್ತೀಚೆಗೆ ಚಾಳಿಗಳಾದ ಬೆಳಗಾವಿ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದ ಬೆನ್ನಲ್ಲೇ, “OPS ಜಾರಿಯಾಯಿತಾ?”, “NPS ರದ್ದಾಯಿತಾ?” ಎಂಬ ಪ್ರಶ್ನೆಗಳು ಮತ್ತೆ ಚರ್ಚೆಗೆ ಬಂದಿವೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ನಂತರ, ಈ ವಿಚಾರ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿವಾಹಿನಿಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ನಿಜಕ್ಕೂ ಸದನದಲ್ಲಿ ಏನು ಚರ್ಚೆಯಾಯ್ತು? ಸರ್ಕಾರ ಕೊಟ್ಟ ಉತ್ತರವೇನು? ಇದು OPS ಜಾರಿಗೆ ಮೊದಲ ಹೆಜ್ಜೆಯೇ?
ವಿಧಾನಸಭೆಯಲ್ಲಿ OPS ಬಗ್ಗೆ ಏಕೆ ಚರ್ಚೆಯಾಯಿತು?
ರಾಜ್ಯದ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಪಿಂಚಣಿ ವ್ಯವಸ್ಥೆಯ ಬಗ್ಗೆ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವೇದವ್ಯಾಸ ಕಾಮತ್ ಅವರಿಂದ ಪ್ರಶ್ನೆ ಕೇಳಲಾಯಿತು. New Pension Scheme (NPS) ಅಡಿಯಲ್ಲಿ ಇರುವ ನೌಕರರಿಗೆ ಭವಿಷ್ಯದ ಪಿಂಚಣಿ ಭದ್ರತೆ ಕುರಿತ ಚಿಂತೆಗಳ ಹಿನ್ನೆಲೆಯಲ್ಲಿ, ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ತರಬೇಕೆಂಬ ಬೇಡಿಕೆ ಇಟ್ಟರು.
ಈ ವೇಳೆ ಶಾಸಕರು OPS ಕುರಿತು ಸರ್ಕಾರದ ನಿಲುವು ಏನು ಎಂದು ಪ್ರಶ್ನಿಸಿದರು.
ಇದೇ ಚರ್ಚೆಯು ಸಾರ್ವಜನಿಕ ವಲಯದಲ್ಲಿ ದೊಡ್ಡ ಕುತೂಹಲಕ್ಕೆ ಕರಣ ವಾಗಿದೆ.
ಸದನದಲ್ಲಿ ಸರ್ಕಾರ ಕೊಟ್ಟ ಸ್ಪಷ್ಟ ಉತ್ತರ ಏನು?
ವಿಧಾನಸಭೆಯಲ್ಲಿ ಕೇಳಲಾದ ಈ ಪ್ರಶ್ನೆಗೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉತ್ತರಿಸಿದರು.
ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಯಾವುದೇ ತಕ್ಷಣದ ಅಥವಾ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸದನಕ್ಕೆ ಸ್ಪಷ್ಟಪಡಿಸಿದರು.
OPS ಜಾರಿಗೆ ಸಂಬಂಧಿಸಿದಂತೆ ರಾಜ್ಯದ ಹಣಕಾಸು ಸ್ಥಿತಿ, ಭವಿಷ್ಯದ ಪಿಂಚಣಿ ಹೊಣೆಗಾರಿಕೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಪರಿಣಾಮಗಳನ್ನು ವಿಸ್ತೃತವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಈ ಹಿನ್ನೆಲೆ, ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದೆ ಎಂದು ತಿಳಿಸಲಾಯಿತು.
OPS ಜಾರಿಗೆ ಸಮಿತಿ ಅಥವಾ ಅಧ್ಯಯನ ಹಂತ?
ಸರ್ಕಾರದ ಹೇಳಿಕೆಯ ಪ್ರಕಾರ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬಹುದಾದ ಸಾಧ್ಯತೆಗಳ ಬಗ್ಗೆ ಅಧ್ಯಯನ ಮತ್ತು ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಆರ್ಥಿಕ ಭಾರ ಮತ್ತು ಆಡಳಿತಾತ್ಮಕ ಅಂಶಗಳನ್ನು
ಪರಿಗಣಿಸಲಾಗುತ್ತಿದೆ.
ಆದರೆ, ಈ ತನಕ New Pension Scheme (NPS) ರದ್ದತಿ ಅಥವಾ OPS ಅನ್ನು ಎಲ್ಲ ನೌಕರರಿಗೆ ಜಾರಿಗೆ ತರುವ ಕುರಿತು ಯಾವುದೇ ಅಧಿಕೃತ ಆದೇಶ ಅಥವಾ ಅಧಿಸೂಚನೆ ಹೊರಬಿದ್ದಿಲ್ಲ.
ನೌಕರರಲ್ಲಿ ಏಕೆ ಇಷ್ಟು ನಿರೀಕ್ಷೆ?
OPS ಅಡಿಯಲ್ಲಿ ನಿವೃತ್ತಿಯ ನಂತರ ನಿಗದಿತ ಪಿಂಚಣಿ ದೊರೆಯುತ್ತಿತ್ತು. ಆದರೆ NPS ವ್ಯವಸ್ಥೆ ಮಾರುಕಟ್ಟೆ ಆಧಾರಿತವಾಗಿರುವುದರಿಂದ, ಭವಿಷ್ಯದ ಪಿಂಚಣಿ ಮೊತ್ತ ನಿಶ್ಚಿತವಾಗಿರುವುದಿಲ್ಲ ಎಂಬ ಆತಂಕ
ಸರ್ಕಾರಿ ನೌಕರರಲ್ಲಿದೆ. ಈ ಕಾರಣದಿಂದಲೇ, OPS ಮರುಜಾರಿಗೆ ನೌಕರ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ. ವಿಧಾನಸಭೆಯ ಚರ್ಚೆ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಎಷ್ಟು ಸತ್ಯ?
ಇತ್ತೀಚೆಗೆ
“OPS ಜಾರಿಯಾಗಿದೆ”,
“ಎಲ್ಲಾ ನೌಕರರಿಗೆ ಹಳೆಯ ಪಿಂಚಣಿ ಸಿಗಲಿದೆ ”
ಎಂಬ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇವುಗಳಿಗೆ ಯಾವುದೇ ಅಧಿಕೃತ ಸರ್ಕಾರಿ ದಾಖಲೆಗಳ ಬೆಂಬಲ ಇಲ್ಲ. ವಿಧಾನಸಭೆಯಲ್ಲಿನ ಚರ್ಚೆಯನ್ನು
ಅಂತಿಮ ನಿರ್ಧಾರ ಎಂದು ಅರ್ಥಮಾಡಿಕೊಳ್ಳುವುದು ತಪ್ಪು.
ಅಂತಿಮವಾಗಿ ನಿಜವಾದ ಸ್ಥಿತಿ ಏನು?
ಕರ್ನಾಟಕದಲ್ಲಿ ಹಳೆಯ ಪಿಂಚಣಿ ಯೋಜನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿರುವುದು ಸತ್ಯ. ಆದರೆ, ಈ ಕ್ಷಣಕ್ಕೆ OPS ಜಾರಿಗೆ ಬಂದಿಲ್ಲ. ಸರ್ಕಾರ ಅಧ್ಯಯನ ಮತ್ತು ಪರಿಶೀಲನೆಯ ಹಂತದಲ್ಲಿದ್ದು,
ಅಂತಿಮ ನಿರ್ಧಾರವನ್ನು ಅಧಿಕೃತ ಆದೇಶ ಅಥವಾ ಅಧಿಸೂಚನೆಯ ಮೂಲಕ ಮಾತ್ರ ಪ್ರಕಟಿಸಲಾಗುತ್ತದೆ. ಅದರ ತನಕ, OPS ಜಾರಿಗೆ ಸಂಬಂಧಿಸಿದ ಯಾವುದೇ ಸುದ್ದಿ ಅಂತಿಮ ಎಂದು ಪರಿಗಣಿಸುವುದು ಸರಿಯಲ್ಲ.







