ಕೆಲವು ಮುನ್ನೆಚ್ಚರಿಕೆಯ ಸಲುವಾಗಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ರೈಲಿನಲ್ಲಿ ಯಾವುದೇ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ರಾತ್ರಿ ಸಮಯದಲ್ಲಿ ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಕೆಲವು ರೈಲುಗಳಲ್ಲಿ ಈ ಕಾರಣಕ್ಕಾಗಿ ಬೆಂಕಿಯ ಅವಘಡಗಳು ಕೂಡ ಸಂಭವಿಸಿವೆ ಹಾಗಾಗಿ ಇಂತಹ ಕಠಿಣ ನಿರ್ಧಾರವನ್ನು ಭಾರತೀಯ ರೈಲ್ವೆ ತೆಗೆದುಕೊಂಡಿದೆ.
ರೈಲ್ವೆ ಹಿರಿಯ ಅಧಿಕಾರಿಗಳ ಪ್ರಕಾರ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ಹೊತ್ತು ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಸೌಲಭ್ಯವನ್ನು ಇನ್ನು ಮುಂದೆ ನೀಡಲು ಆಗುವುದಿಲ್ಲ ಎಂದು ನಿರ್ಧರಿಸಲಾಗಿದೆ. ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ರೈಲಿನಲ್ಲಿ ರಾತ್ರಿ ಹೊತ್ತು 11ರಿಂದ ಬೆಳಗ್ಗೆ 5ರವರೆಗೆ ಚಾರ್ಜ್ ಮಾಡುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ನಿರ್ಧಾರವನ್ನು ಬಹಳ ಹಿಂದೆ ಕೈಗೊಳ್ಳಲಾಗಿತ್ತು. ರೈಲ್ವೆ ಮಂಡಳಿ ಈ ಸೂಚನೆಯನ್ನು ಮಾರ್ಚ್ 16 2021 ರಲ್ಲಿ ಜಾರಿಗೊಳಿಸಿತ್ತು. ಆದರೂ ಪ್ರಯಾಣಿಕರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಇಂದಿಗೂ ರಾತ್ರಿ ರೈಲಿನಲ್ಲಿ ತಮ್ಮ ಫೋನ್ ಚಾರ್ಜ್ ಮಾಡುತ್ತಾರೆ.
ರಾತ್ರಿಯಲ್ಲಿ ಮೊಬೈಲ್ ಫೋನ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವ ಪಾಯಿಂಟ್ಗಳನ್ನ ಸ್ವಿಚ್ ಆಫ್ ಮಾಡಲು ಅಧಿಕಾರಿಗಳು ಈಗಾಗಲೇ ಸೂಚಿಸಿದ್ದಾರೆ. ಈ ರೀತಿ ದೂರದ ಪ್ರಯಾಣದ ರೈಲುಗಳಲ್ಲಿ ಸಣ್ಣ ಬೆಂಕಿ ಅನಾಹುತಗಳು ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜ್ ನಿಂದಲೇ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಬೈಲ್ ಚಾರ್ಜ್ ಗೆ ಇಟ್ಟು ಪ್ರಯಾಣಿಕರು ನಿದ್ದೆ ಮಾಡುತ್ತಾರೆ ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತವೆ ಹಾಗಾಗಿ ರೈಲ್ವೆ ನಿಯಮಗಳ ಪ್ರಕಾರ ರಾತ್ರಿ ಸಮಯದಲ್ಲಿ ಇನ್ನು ಮುಂದೆ ಮೊಬೈಲ್ ಚಾರ್ಜ್ ಮಾಡುವುದನ್ನು ತಪ್ಪಿಸಲು ಜನರಿಗೆ ಸೂಚನೆ ನೀಡಲಾಗಿದೆ.