ಕಳೆದ ಕೆಲವು ವರ್ಷಗಳಿಂದ ಇಂಧನದ ಬೆಲೆ ಎಷ್ಟು ಏರಿಕೆಯಾಗಿದೆ ಎಂಬುದು ನಿಮಗೆಲ್ಲರಿಗೂ ಗೊತ್ತು ಈಗಾಗಲೇ ಸಾರ್ವಜನಿಕರಿಗೆ ಇದರ ಬಿಸಿ ತಟ್ಟಿದೆ. ಹಾಗಾಗಿಯೇ ಇಂದು ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪ್ರಚಲಿತದಲ್ಲಿವೆ. ಸರ್ಕಾರವು ಕೂಡ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಬೆಂಬಲಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಖರ್ಚಿನ ವಿಷಯಕ್ಕೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್ ಗಿಂತಲೂ ಅಗ್ಗವಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳಿಂದ ಮಾಲಿನ್ಯ ಕೂಡ ಕಡಿಮೆ. ಹಾಗಾಗಿ ಇಂದು ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಎಲೆಕ್ಟ್ರಿಕ್ ವಾಹನಗಳು ಲಭ್ಯವಿವೆ ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಮಾರಾಟ ಎರಡು ಇನ್ನಷ್ಟು ಹೆಚ್ಚಳ ಆಗಬಹುದು.
ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಹೆಚ್ಚು ಬಿಡುಗಡೆ ಆಗುತ್ತಿದ್ದ ಹಾಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಕೂಡ ಹೆಚ್ಚಾಗಿದೆ. ಇವಿ ವಾಹನವನ್ನು ಖರೀದಿಸಿದ ಮೇಲೆ ಚಾರ್ಜಿಂಗ್ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಬೇಗ ಹಾಳಾಗುವಂತೆ ಮಾಡುತ್ತದೆ ಜೊತೆಗೆ ಬೆಂಕಿ ಅನಾಹುತವನ್ನು ಕೂಡ ಎದುರಿಸಬೇಕಾಗಬಹುದು. ಹಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ನೀವು ಹೇಗೆ ಸುರಕ್ಷಿತವಾಗಿ ಬಳಸಬೇಕು ಯಾವ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ ಮುಂದೆ ಓದಿ.
ಬ್ಯಾಟರಿ ಡಿಸ್ಚಾರ್ಜ್:
ಎಲೆಕ್ಟ್ರಿಕ್ ವಾಹನವನ್ನು ನೀವು ಬಳಸುವುದಾದರೆ ಆ ವಾಹನದಲ್ಲಿ ಇರುವ ಬ್ಯಾಟರಿ ಸಂಪೂರ್ಣವಾಗಿ ಡ್ರೈ ಆಗದಂತೆ ನೋಡಿಕೊಳ್ಳಿ. ಬ್ಯಾಟರಿ 20% ಇರುವಾಗಲೇ ಅದನ್ನು ಚಾರ್ಜ್ ಮಾಡಬೇಕು. ಕನಿಷ್ಠ 80% ತಲುಪುವವರೆಗೂ ಚಾರ್ಜ್ ಮಾಡಿ. ಬ್ಯಾಟರಿ ಸಂಪೂರ್ಣವಾಗಿ ಮುಗಿದು ಹೋದ ನಂತರ ಅಥವಾ ಡ್ರೈ ಆದ ನಂತರ ಅದನ್ನು ಚಾರ್ಜ್ ಮಾಡಿದರೆ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ.
ಪದೇ ಪದೇ ಚಾರ್ಜ್ ಮಾಡಬೇಡಿ:
ಹೆಚ್ಚಿನವರಿಗೆ ಈ ಅಭ್ಯಾಸ ಇರುತ್ತದೆ ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು ಆಗಾಗ ಚಾರ್ಜ್ ಮಾಡುತ್ತಾರೆ ಹೀಗೆ ಮಾಡುವುದರಿಂದ ಬಾಳಿಕೆ ಕಡಿಮೆಯಾಗುತ್ತದೆ. ಬ್ಯಾಟರಿ ಕನಿಷ್ಠ ಮಟ್ಟ ತಲುಪುವುದಕ್ಕಿಂತ ಮೊದಲು ರಿ-ಚಾರ್ಜ್ ಮಾಡಿದರೆ ಸಾಕು. ಅಗತ್ಯವಿದ್ದಾಗ ಮಾತ್ರ ಚಾರ್ಜ್ ಮಾಡಿದರೆ ಬ್ಯಾಟರಿ ಲೈಫ್ ಚೆನ್ನಾಗಿ ಬರುತ್ತದೆ.
ಓಡಿಸಿದ ತಕ್ಷಣ ಚಾರ್ಜ್ ಮಾಡಬೇಡಿ:
ಇವಿ ವಾಹನದಲ್ಲಿ ಸವಾರಿ ಮಾಡಿದ ತಕ್ಷಣವೇ ಚಾರ್ಜಿಂಗ್ ಇಡಬಾರದು ಯಾಕೆಂದರೆ ಬ್ಯಾಟರಿಯಲ್ಲಿ ಲೀಥಿಯಂ-ಐಯಾನ್ ಬಳಸಲಾಗಿರುತ್ತದೆ. ಈ ಬ್ಯಾಟರಿಗೆ ವಿದ್ಯುತ್ ಸರಬರಾಜು ಆದಾಗ ಅದು ಬಿಸಿ ಆಗುತ್ತದೆ ಹಾಗಾಗಿ ವಾಹನ ಓಡಿಸಿ ಬಂದ ತಕ್ಷಣಕ್ಕೆ ರೀಚಾರ್ಜ್ ಮಾಡಿದರೆ ಅದು ಬ್ಯಾಟರಿ ಲೈಫ್ ಮೇಲೆ ಪರಿಣಾಮ ಬೀರಬಹುದು. ಸವಾರಿ ಮಾಡಿ ಬಂದ ನಂತರ ಕನಿಷ್ಠ 30 ನಿಮಿಷ ಕಾಲ ಅದು ತಣ್ಣಗಾಗಲು ಬಿಟ್ಟು ಮತ್ತೆ ರಿಚಾರ್ಜ್ ಮಾಡಿ.
ಅತಿಯಾಗಿ ಚಾರ್ಜ್ ಮಾಡಬೇಡಿ:
ಇವಿ ವಾಹನವನ್ನು ಹೆಚ್ಚು ಚಾರ್ಜ್ ಮಾಡುವುದರಿಂದಲೂ ಅದರ ಬ್ಯಾಟರಿ ಲೈಫ್ ಹಾಳಾಗುತ್ತದೆ. ಬ್ಯಾಟರಿ ಒಮ್ಮೆ 100% ಚಾರ್ಜ್ ಆದ ನಂತರ ಚಾರ್ಜ್ ಅನ್ನು ತಪ್ಪಿಸಿ. ಈ ರೀತಿ ಮಾಡಿದರೆ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಲೀಥಿಯಂ ಐಯಾನ್ ಬ್ಯಾಟರಿಗಳು ಕನಿಷ್ಠ 30ರಿಂದ ಗರಿಷ್ಠ 80 ಪರ್ಸೆಂಟ್ ವರೆಗೆ ಚಾರ್ಜ್ ಶ್ರೇಣಿ ಹೊಂದಿವೆ ಹಾಗಾಗಿ ನೀವು ನಿಮ್ಮ ವಾಹನ 80ರಷ್ಟು ಚಾರ್ಜ್ ಮಾಡಿದರೆ ಸಾಕು.