ಜಗತ್ತಿನಲ್ಲಿ ಸಾಕಷ್ಟು ದೇಶಗಳು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ ಅದನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಸಮುದ್ರದ ಆಳದಲ್ಲಿ, ನದಿ ನೀರಿನ ಮೇಲ್ಮೈನಲ್ಲಿ ಪ್ಲಾಸ್ಟಿಕ್ ನಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಸಾಗರದ ಜಲಚರಗಳು ಪ್ಲಾಸ್ಟಿಕ್ ಸೇವನೆಯಿಂದ ನಶಿಸುತ್ತಿವೆ.
ಆದರೆ ಈಗ ಜರ್ಮನ್ ವಿಜ್ಞಾನಿಗಳು ಈ ಸಮಸ್ಯೆಗೆ ದೊಡ್ಡ ರಿಲೀಫ್ ನೀಡಿದ್ದಾರೆ. ಹೌದು, ಜರ್ಮನಿಯ ವಿಜ್ಞಾನಿಗಳು ಪ್ಲಾಸ್ಟಿಕ್ ತಿನ್ನುವ ಶಿಲೀಂದ್ರಗಳನ್ನು ಗುರುತಿಸಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ಸಾಗರ -ಸಮುದ್ರಗಳನ್ನು ಕಲುಷಿತಗೊಳಿಸುವ ಲಕ್ಷಾಂತರ ತ್ಯಾಜ್ಯದ ಸಮಸ್ಯೆಗೆ ದೊಡ್ಡ ಪರಿಹಾರ ಸಿಗುವ ಭರವಸೆ ಹುಟ್ಟಿದೆ.
ಪ್ಲಾಸ್ಟಿಕ್ ತಿನ್ನುವ ಶಿಲೀಂದ್ರಗಳ ಬಗ್ಗೆ ಈಶಾನ್ಯ ಜರ್ಮನಿಯ ಲೇಕ್, ಸ್ಟೇಕ್ಲೀನ್ ನಲ್ಲಿ ಸಂಶೋಧನೆ ನಡೆಸಲಾಗಿದ್ದು ಪ್ಲಾಸ್ಟಿಕ್ ನಲ್ಲಿ ಮೈಕ್ರೋ ಫಂಗಸ್ ಬೆಳೆಯುವ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಕೆಲವು ಶಿಲೀಂದ್ರಗಳು ಸಿಂಥೆಟಿಕ್ ಪಾಲಿಮರ್ಗಳನ್ನು ತಿನ್ನುವ ಸಾಮರ್ಥ್ಯವನ್ನು ಹೊಂದಿವೆ ಎಂಬುದಾಗಿ, ಲಿಬೀಚ್ ಇನ್ಸ್ಟಿಟ್ಯೂಟ್ ಸಂಶೋಧನಾ ಮುಖ್ಯಸ್ಥ ಹ್ಯಾನ್ಸ್ ಪೀಟರ್ ಗ್ರಾಸಾರ್ಟ್ (Hans-Peter Grossart) ಮಾಧ್ಯಮಕ್ಕೆ ತಿಳಿಸಿದ್ದಾರೆ.
“ನಮ್ಮ ಸಂಶೋಧನೆಯಿಂದ ತಿಳಿದು ಬಂದಿರುವ ಆಶ್ಚರ್ಯಕರ ವಿಷಯವೆಂದರೆ, ಕೆಲವು ಶಿಲೀಂದ್ರಗಳು ಸಿಂಥೆಟಿಕ್ ಪೊಲಿಮರ್ ಗಳ ಮೇಲೆ ಪ್ರತ್ಯೇಕವಾಗಿ ಬೆಳೆಯಬಲ್ಲವು ಜೊತೆಗೆ ಸಂತಾನೋತ್ಪತ್ತಿ ಮಾಡಬಲ್ಲವು. ಇದರಿಂದ ಪಾಲಿಮರ್ ಪ್ಲಾಸ್ಟಿಕ್ ಪೊಲ್ಲ್ಯೂಷನ್ ಕಡಿಮೆ ಆಗುವ ನಿರೀಕ್ಷೆ ಇದೆ. ಆದಾಗ್ಯೂ ಈ ಶಿಲೀಂದ್ರಗಳು ಬಹಳ ಕಡಿಮೆ ಪ್ರಮಾಣದಲ್ಲಿ ಬೆಳೆಯಬಹುದಾದ್ದರಿಂದ, ಪ್ಲಾಸ್ಟಿಕ್ ಸಮಸ್ಯೆಯಿಂದ ನಿಜವಾಗಿ ಸಲ್ಯೂಷನ್ ಪಡೆದುಕೊಳ್ಳಬೇಕು ಅಂದ್ರೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು”
ಎಂದು ಅವರು ತಿಳಿಸಿದರು.
18 ಶಿಲೀಂದ್ರಗಳ ಪತ್ತೆ!
ಸಂಶೋಧನೆಯ ಪ್ರಕಾರ 18 ಆಯ್ದ ಶಿಲೀಂದ್ರಗಳಲ್ಲಿ ನಾಲ್ಕು ಶಿಲೀಂದ್ರಗಳು ಪ್ಲಾಸ್ಟಿಕ್ ಅನ್ನು ಸೇವಿಸಬಹುದಾದ ಶಿಲೀಂದ್ರಗಳಾಗಿವೆ (Plastic Eating Fungi). ಸಾಮಾನ್ಯವಾಗಿ ಪ್ಲಾಸ್ಟಿಕನ್ನು ನಾಶಪಡಿಸಬೇಕಾದರೆ ಅದರಿಂದ ಹೊರಬರುವ ಕಾರ್ಬನ್ ನಮ್ಮ ಸುತ್ತಲಿನ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ರೆ ಮೈಕ್ರೋಶಿಲೀಂದ್ರಗಳು ಪ್ಲಾಸ್ಟಿಕ್ ನಾಶಪಡಿಸುವಾಗ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂಬುದಾಗಿ ವಿಜ್ಞಾನಿ ಹ್ಯಾನ್ಸ್ ಪೀಟರ್ ಹೇಳಿದರು.
ಈ ಸಂಶೋಧನೆ ಸಕ್ಸೆಸ್ ಆದ್ರೆ, ಈ ಶಿಲೀಂದ್ರಗಳನ್ನು ಒಳ ಚರಂಡಿ ಸಂಸ್ಕರಣಾ ಘಟಕಗಳಲ್ಲಿ ಪ್ಲಾಸ್ಟಿಕ್ ನಾಶಪಡಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
1950 ರಲ್ಲಿ 1.7 ಮಿಲಿಯನ್ ಟನ್ಗಳಷ್ಟಿದ್ದ ಪ್ಲಾಸ್ಟಿಕ್ ಬಳಕೆ 2021ರ ಅಂಕಿ ಅಂಶದ ಪ್ರಕಾರ ಪ್ರಪಂಚದಾದ್ಯಂತ ಸುಮಾರು 390 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಪ್ಯಾಕೆಜಿಂಗ್ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದರೆ ಮಾತ್ರ ಕಲುಷಿ ಪರಿಸರವನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸಬಹುದು ಎಂದಿರುವ ವಿಜ್ಞಾನಿಗಳು, ಇದೀಗ ಶಿಲೀಂದ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ಲಾಸ್ಟಿಕ್ ನಾಶಪಡಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.