Vikram Lander: ಚಂದ್ರನ ಮೇಲೆ ಸೂರ್ಯೋದಯಕ್ಕೆ ಕ್ಷಣಗಣನೆ! ವಿಕ್ರಂ ಲ್ಯಾಂಡರ್ ರೋವರ್ ಕಥೆ ಏನಾಯ್ತು?
ಯಶಸ್ವಿ ಚಂದ್ರಯಾನ-3 (Chandrayaan-3) ಮಿಷನ್ ನಂತರ, ಈಗ ಎಲ್ಲರ ಕಣ್ಣು ಸೂರ್ಯೋದಯದ ನಂತರ ಚಂದ್ರಯಾನ ಮತ್ತೆ ಕಾರ್ಯನಿರ್ವಹಿಸುತ್ತದೆಯೇ ಎಂಬುದರ ಮೇಲೆಯೇ ಇದೆ, ಆದರೆ ಚಂದ್ರಯಾನ 3 ರ ಲ್ಯಾಂಡರ್ ವಿಕ್ರಮ್ (Vikram Lander) ಮತ್ತು ರೋವರ್ ಪ್ರಗ್ಯಾನ್ (Pragyan Rover) ಚಂದ್ರನ ಮೇಲೆ ಸೂರ್ಯ ಉದಯಿಸಿದ ನಂತರ ಮತ್ತೆ ಎಚ್ಚರಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎಂದು ವಿಜ್ಞಾನಿ ಗಳು ಹೇಳಿದ್ದಾರೆ.
ಹೌದು ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು ಅತೀ ಅವಶ್ಯಕ. ಆದ ಕಾರಣದಿಂದಲೇ ಇಸ್ರೊ ಬಲು ಸೂಕ್ಷ್ಮವಾಗಿ ಚಂದ್ರನ ದಕ್ಷಿಣ ಅಂಗಳದಲ್ಲಿ ಯಾವಾಗ ಸೂರ್ಯೋದಯವಾಗಲಿದೆ ಎಂಬ ನಿಖರ ಲೆಕ್ಕಾಚಾರದಡಿಯಲ್ಲಿ ಗಗನನೌಕೆ ಆಗಸ್ಟ್ 23ರಂದು ಇಳಿಯುವಂತೆ ತನ್ನ ಯೋಜನೆ ಸಿದ್ಧಪಡಿಸಿಕೊಂಡಿತ್ತು.
ಯೋಜನೆ ಮುಗಿದ ಬಳಿಕ ಏನು?
ಚಂದ್ರನಲ್ಲಿನ ತಮ್ಮ ಹೊಣೆಗಾರಿಕೆ ಪೂರ್ಣಗೊಳಿಸಿದ ನಂತರ ವಿಕ್ರಮ್ ಲ್ಯಾಂಡರ್ (Vikram Lander), ಪ್ರಗ್ಯಾನ್ ರೋವರ್ (Pragyan Rover) ಮತ್ತು ಪ್ರೊಪಲ್ಷನ್ ಮಾಡ್ಯೂಲ್ ವಾಪಸ್ ಭೂಮಿಗೆ ಬರುವುದಿಲ್ಲ. ಚಂದ್ರಲೋಕಕ್ಕೆ ತೆರಳಿದ ಅವುಗಳ ಜೀವನ ಅಲ್ಲಿಯೇ ಅಂತ್ಯಗೊಳ್ಳಲಿವೆ. ತಮ್ಮ ಪ್ರಯೋಗಗಳನ್ನು ಮುಗಿಸಿದ ರೋವರ್ ಹಾಗೂ ಲ್ಯಾಂಡರ್ ಚಂದಮಾಮನಲ್ಲಿ ಪಳೆಯುಳಿಕೆಗಳಾಗಿ ಉಳಿಯಲಿವೆ. ಎಂದು ಕೂಡಾ ಹೇಳಲಾಗುತ್ತಿದೆ
ಚಂದ್ರ ಮೇಲ್ಮೈನಲ್ಲಿ ತನ್ನ ಕೆಲಸ ಮುಗಿಸಿರುವ ಚಂದ್ರಯಾನ-3 (Chandrayaan-3) ರ ಪ್ರಗ್ಯಾನ್ ರೋವರ್ (Pragyan Rover) ಮತ್ತು ವಿಕ್ರಂ ಲ್ಯಾಂಡರ್ (Vikram Lander) ನಿದ್ರೆಗೆ ಜಾರಿದೆ (ಸ್ಲೀಪ್ ಮೂಡ್) ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಚಂದ್ರನ ಮೇಲೆ ಸುಮಾರು 100 ಮೀಟರ್ ಗಳಷ್ಟು ದೂರ ಸಂಚರಿಸಿರುವ ಪ್ರಗ್ಯಾನ್ ರೋವರ್, ತನಗೆ ವಹಿಸಿದ್ದ ಕೆಲಸ ಪೂರ್ಣಗೊಳಿಸಿದೆ. ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಿ ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. ರೋವರ್ ನ APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್‌ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಪ್ರಸ್ತುತ ಪ್ರಗ್ಯಾನ್ ರೋವರ್ (Pragyan Rover) ನ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ. ಆದರ ಸೌರ ಫಲಕಗಳು ಚಂದ್ರನ ಮೇಲೆ ಮುಂದಿನ ಸೂರ್ಯೋದಯ (ಸೆಪ್ಟೆಂಬರ್ 22, 2023) ದಂದು ಬೆಳಕನ್ನು ಸ್ವೀಕರಿಸಲು ಸಿದ್ಧವಾಗಿದೆ. ಮುಂದಿನ ಸೂರ್ಯೋದದ ಬಳಿಕ ರೋವರ್ ಮತ್ತೊಂದು ಕಾರ್ಯಾಚರಣೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಬಹುದು ಅಥವಾ ಚಂದ್ರನ ಮೇಲೆ ಭಾರತ ಶಾಶ್ವತ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಇಸ್ರೋ ಹೇಳಿದೆ.
ಆಗಸ್ಟ್ 23, 2023ರಂದು ಚಂದ್ರಯಾನ-3 ಯೋಜನೆಯ ಮೂಲಕ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ ಐತಿಹಾಸಿಕ ಸಾಧನೆ ಮಾಡಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸೇಫ್ ಲ್ಯಾಂಡಿಂಗ್ (Safe Land) ಆದ ಬಳಿಕ, ಅದರ ಒಳಗಡೆಯಿಂದ ಹೊರ ಬಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಓಡಾಡಿ ಭೂಮಿಗೆ ಮಾಹಿತಿ ರವಾನಿಸಿದೆ.