ಕರ್ನಾಟಕದಲ್ಲಿ ತನ್ನ ಪರವಾಗಿ ಜನಾಭಿಪ್ರಾಯ ರೂಪಿಸುವಲ್ಲಿ ಮಾಧ್ಯಮ ಸಂಸ್ಥೆಗಳಿಂದ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ನೂತನ ಮಾಧ್ಯಮ ಸಂಸ್ಥೆಯನ್ನು (Congress Media Organization) ಆರಂಭಿಸುವತ್ತ ಚಿಂತನೆ ನಡೆಸಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಸಂವಹನ ವಿಭಾಗವನ್ನು ಬಲಪಡಿಸುವ ಮೂಲಕ ಸಾರ್ವಜನಿಕ ಜನಾಭಿಪ್ರಾಯವನ್ನು ಬದಲಿಸುವ ದೃಷ್ಠಿಯಿಂದ ಸ್ವಂತ ಮಾಧ್ಯಮ ಸಂಸ್ಥೆ ಆರಂಭಿಸಲು ನಿರ್ಧರಿಸಿದೆ.
ಇಂದು ಈ ಬಗ್ಗೆ ಮಾತನಾಡಿರುವ ಜಿ.ಸಿ ಚಂದ್ರಶೇಖರ್ ಅವರು, ಬಿಜೆಪಿ ಪಕ್ಷವು ಕಾಂಗ್ರೆಸ್ ಮೇಲೆ ಸದಾ ಸುಳ್ಳು ಆರೋಪ ಮಾಡುತ್ತಿದೆ. ನಾವು ಕಳೆದ 50 ವರ್ಷಗಳಲ್ಲಿ ದೇಶಕ್ಕಾಗಿ ದುಡಿದಿದ್ದೇವೆ, ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಆದರೆ, ಬಿಜೆಪಿ ತನ್ನ ಸುಳ್ಳು ನಿರೂಪಣೆ ಮೂಲಕ ಜನರಲ್ಲಿ ಪಕ್ಷದ ಬಗ್ಗೆ ತಪ್ಪು ಕಲ್ಪನೆ ಬಿತ್ತುತ್ತಿದೆ.
ಬಿಜೆಪಿಯವರ ಈ ಸುಳ್ಳು ನಿರೂಪಣೆ ಮುರಿಯಲು ನಮಗೆ ಪ್ರಸ್ತುತ ಮಾಧ್ಯಮಗಳ ಬೆಂಬಲ ಸಾಕಾಗುತ್ತಿಲ್ಲ. ಪಕ್ಷಕ್ಕೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಪಕ್ಷದ ನಾಯಕರಿಗಿದೆ. ಆದ್ದರಿಂದ, ನೂತನ ಪತ್ರಿಕೆ, ಯೂಟ್ಯೂಬ್ ಚಾನೆಲ್ ಹಾಗೂ ವೆಬ್ ಸೈಟ್ ಆರಂಭಿಸುವ (Congress Media Organization) ಬಗ್ಗೆ ಚಿಂತನೆ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಯೇ ಸ್ಟುಡಿಯೋ ತೆರೆಯಲು ನಿರ್ಧರಿಸಲಾಗಿದೆ.
ಈ ನೂತನ ಮಾಧ್ಯಮಗಳ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬೇರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೆಜ್ಜೆ?
ದೇಶದಾದ್ಯಂತ ಹಲವು ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಾಧ್ಯಮ ಸಂಸ್ಥೆಗಳಲ್ಲಿ ಈಗಾಗಲೇ ಬೇರೂರಿದ್ದಾರೆ. ಅವರವರ ಪತ್ರಿಕೆ, ಸುದ್ದಿ ವಾಹಿನಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷಗಳು ಮಾಧ್ಯಮ ಸಂಸ್ಥೆಗಳ ಮೇಲೆ ಹಿಡಿತಹೊಂದಿವೆ. ಆದರೆ, ಕರ್ನಾಟಕ ಮಾಧ್ಯಮಗಳ ವಿಷಯಕ್ಕೆ ಬಂದರೆ, ಯಾವುದೇ ಪಕ್ಷಕ್ಕೂ ಅಂತಹ ಬಿಗಿ ಹಿಡಿತ ಸಾಧ್ಯವಾಗಿಲ್ಲ.
ಇದೀಗ, ಕಾಂಗ್ರೆಸ್ ತನ್ನ ನೂತನ ಮಾಧ್ಯಮ ಸಂಸ್ಥೆ (Congress Media Organization) ರೂಪಿಸಿ ತನ್ನ ಪರ ಜನಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ಈ ಹಿಂದೆ ಆರಂಭವಾಗಿದ್ದ ಶ್ರೀರಾಮುಲು ಹಾಗೂ ಜನಾರ್ಧನ್ ರೆಡ್ಡಿ ಒಡೆತನದ ಜನಶ್ರೀ ಸುದ್ದಿ ವಾಹಿನಿ ಹಾಗೂ ಜೆಡಿಎಸ್‌ನ ಕುಮಾರಸ್ವಾಮಿಯವರ ಒಡೆತನದ ಕಸ್ತೂರಿ ಸುದ್ದಿವಾಹಿನಿಗಳು ಹೇಳಹೆಸರಿಲ್ಲದಂತಾಗಿವೆ. ಇದರ ಹೊರತಾಗಿ, ಸೈದ್ಧಾಂತಿಕ ಕಾರಣಗಳಿಗಾಗಿ ಹೊಸ ದಿಗಂತ ಪತ್ರಿಕೆ ಬಿಜೆಪಿಗೆ ಹಾಗೂ ವಾರ್ತಾ ಭಾರತಿ ಪತ್ರಿಕೆ ಕಾಂಗ್ರೆಸ್‌ಗೆ ಬಹುತೇಕ ತಮ್ಮ ನಿಷ್ಠೆಯನ್ನು ತೋರಿಸುತ್ತವೆ.
ಪೊಲಿಟಿಕಲ್ ಮೀಡಿಯಾ ಹೌಸ್ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿವೆ?
ಇನ್ನು, ಬೇರೆ ಬೇರೆ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ಮಾಧ್ಯಮ ಸಂಸ್ಥೆಗಳನ್ನು ಆರಂಭಿಸಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ಜಾಗೋ ಬಾಂಗ್ಲಾ ಪತ್ರಿಕೆಯನ್ನು ಹಾಗೂ ಕೊಲ್ಕತ್ತಾ ಟಿವಿಯನ್ನು ನಡೆಸುತ್ತಿದೆ. ಸಿಪಿಐ(ಎಂ) ಪಕ್ಷವು ಟಿವಿ24 ಘಂಟಾ ವಾಹಿನಿ ನಡೆಸುತ್ತಿದೆ. ನಮ್ಮ ಪಕ್ಕದ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯವರ ಒಡೆತನದಲ್ಲಿ ಸಾಕ್ಷಿ ಟಿವಿ, ಎನ್ ಟಿವಿ ಹಾಗೂ ಟಿವಿ 5 ಕಾರ್ಯನಿರ್ವಹಿಸುತ್ತಿವೆ. ಒಡಿಸಾದ ಬಿಜೆಡಿ ಪಕ್ಷದ ನಾಯಕ ಬಿಜಯಾಂತ್ ಪಾಂಡ ಒಡೆತನದಲ್ಲಿ ಒಡಿಸ್ಸಾ ಟಿವಿ, ತಮಿಳುನಾಡಿನಲ್ಲಿ ಐಎಡಿಎಂಕೆಯ ಜಯಾ ಟಿವಿ, ಡಿಎಂಕೆಯ ಕಲಾನಿಧಿ ಮಾರನ್ ಅವರ ಸನ್ ಟಿವಿ, ಸನ್ ನ್ಯೂಸ್, ಕೆಟಿವಿ, ಜೆಮಿನಿ ಟಿವಿ ಕಾರ್ಯನಿರ್ವಹಿಸುತ್ತಿವೆ.