ಪ್ರಕೃತಿ ಯಾವಾಗ ಮುನಿಸಿಕೊಳ್ಳುತ್ತಾಳೆ ಹೇಳಲು ಸಾಧ್ಯವಿಲ್ಲ. ಭೂಕಂಪ, ಪ್ರವಾಹ, ಬೆಂಕಿ ಅವಘಡ, ಸುನಾಮಿ ಮೊದಲಾದ ಪ್ರಕೃತಿ ವಿಕೋಪ ಉಂಟಾದಾಗ ಮನುಷ್ಯನ ಜೀವನದ ಮೇಲೆ ದೊಡ್ದ ಪರಿಣಾಮವನ್ನೇ ಉಂಟು ಮಾಡುತ್ತದೆ. ಇಂತಹ ಅವಘಡಗಳು ಸಂಭವಿಸಿದಾಗ ಯಾವುದಾದರೂ ಪರಿಹಾರ ಸಿಗುತ್ತದೆಯೇ. ಇವುಗಳಿಗೂ ವಿಮೆಯ ಲಾಭ ಇದೆಯೇ ಎನ್ನುವುದು ಹಲವರಲ್ಲಿ ಗೊಂದಲ ಇದ್ದೇ ಇರುತ್ತದೆ. ನೈಸರ್ಗಿಕ ವಿಕೋಪಗಳು ನಡೆದಾಗ ಅವುಗಳಿಗೆ ವಿಮೆ ನೀಡಲಾಗುವುದಿಲ್ಲ ಎಂಬುದು ಹಲವು ಜನರ ನಂಬಿಕೆ.
ಅಕ್ಷಯ್ ಕುಮಾರ್ (Akshay Kumar) ಮತ್ತು ಪರೇಶ್ ರಾವಲ್ (Paresh Rawal) ಅವರ ಆ ಒಂದು ಸಿನಿಮಾ ನಿಮಗೂ ನೆನಪಿರಬಹುದು. ಪ್ರಕೃತಿ ವಿಕೋಪದ ಆಗುವ ನಷ್ಟಕ್ಕಾಗಿ ದೇವರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತದೆ. ಈ ಸಿನಿಮಾದ ಉದ್ದಕ್ಕೂ ಕೋರ್ಟ್ ಕೇಸ್ ನಡೆಯುತ್ತದೆ. ಆದರೆ ಸಂಭವಿಸುವ ಪ್ರಕೃತಿ ಅವಘಡಗಳಿಗೆ ಪರಿಹಾರ ಅಥವಾ ವಿಮಾ ಸಿಗಲು ನಿಜಜೀವನದಲ್ಲಿ ಅಷ್ಟು ಕಷ್ಟಪಡಬೇಕಿಲ್ಲ. ನೈಸರ್ಗಿಕ ವಿಪತ್ತು ಪಾಲಿಸಿಯನ್ನು ಕೂಡ ನೀವು ಮಾಡಿಸಬಹುದು. ಕೆಲವು ವಿಮಾ ಕಂಪನಿಗಳು ಗೃಹ ವಿಮಾ ಯೋಜನೆಯ ಸೌಲಭ್ಯವನ್ನು ಒದಗಿಸುತ್ತವೆ. ಗೃಹ ವಿಮಾ ಯೋಜನೆಯನ್ನು ನೀವು ಮಾಡಿಸಿದರೆ, ಮನೆ ನಷ್ಟವಾದರೆ ಮಾತ್ರವಲ್ಲ, ಭೂಕಂಪದಂತಹ ಅನಾಹುತದಿಂದ ಮನೆಯಲ್ಲಿ ಇಟ್ಟಿದ್ದ ವಸ್ತುಗಳನ್ನು ಕಳೆದುಕೊಂಡಿದ್ದರೂ ಅದಕ್ಕೂ ವಿಮೆ ಮೂಲಕ ಪರಿಹಾರ ಪಡೆದುಕೊಳ್ಳಬಹುದು.
ಭೂಕಂಪನ ಅಥವಾ ಇತರ ಪ್ರಕೃತಿ ಅವಗಢಗಳು ಕೆಲವೊಮ್ಮೆ ಎಷ್ಟು ಅಧಿಕವಾಗಿರುತ್ತದೆ ಎಂದರೆ, ಜನ ಮನೆ ಮಠ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಇದರಿಂದ ಸಾಕಷ್ಟು ಸಾವು ನೋವುಗಳು ಕೂಡ ಸಂಭವಿಸುತ್ತವೆ. ಇನ್ನು ಇಂತಹ ಘಟನೆಗಳೂ ಹೇಳಿ ಕೇಳಿ ಸಂಭವಿಸುವಂತದ್ದಲ್ಲ. ಯಾವಾಗ, ಎಲ್ಲಿ, ಯಾವ ಸಮಯದಲ್ಲಿ ಬೇಕಾದರೂ ಜರುಗಬಹುದು. ಇಂತಹ ಪರಿಸ್ಥಿತಿಯಲ್ಲಿ ಗೃಹ ವಿಮೆ ಮಾಡಿಸಿದರೆ, ಸ್ವಲ್ಪಮಟ್ಟಿಗಾದರೂ, ಪರಿಹಾರ ಪಡೆದುಕೊಳ್ಳಲು ಸಾಧ್ಯವಿದೆ.
ಸಾಮಾನ್ಯವಾಗಿ ನೈಸರ್ಗಿಕ ವಿಕೋಪಗಳು ಬಹಳ ವಿರಳ. ಕೆಲವೊಮ್ಮೆ ಬೇರೆ ಕಡೆ ಸಂಭವಿಸಿದಾಗ ಸದ್ಯ ನಮಗೇನೂ ಆಗಿಲ್ಲವಲ್ಲಾ ಅಂತ ಸುಮ್ಮನಾಗಿ ಬಿಡುತ್ತೇವೆ. ಎಷ್ಟೋ ಬಾರಿ ಮುಂದೆ ನಮಗೂ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಅದನ್ನು ಮರೆಯುತ್ತೇವೆ, ಹಾಗಾಗಿ ಇದಕ್ಕಾಗಿ ವಿಮೆ ಮಾಡಿಸುವುದನ್ನೂ ಕೂಡ ನಿರ್ಲಕ್ಷ ಮಾಡುತ್ತೇವೆ. ಒಮ್ಮೆ ವಿಮೆ ಮಾಡಿಸಿದರೆ, ಉಂಟಾಗಿರುವ ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಭರಿಸಬಹುದು.
ಇಷ್ಟೇಲ್ಲಾ ತಿಳಿದ ಮೇಲೆ, ನೀವು ಮನೆ ವಿಮೆ (Home Insurance) ಮಾಡಿಸಿಲ್ಲದೇ ಇದ್ದರೆ, ಕೂಡಲೇ ಮಾಡಿಸಿಕೊಳ್ಳಿ. ಮುಖ್ಯವಾಗಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮತ್ತೆ ಮನೆ, ಜೀವನ ಮರು ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಅದೇ ವಿಮೆ ಇದ್ದರೆ, ನಿಮಗೆ ಸಾಕಷ್ಟು ಹೊರೆ ಕಡಿಮೆಯಾಗುತ್ತದೆ. ಹಾಗಾಗಿ ಗೃಹ ವಿಮೆಯನ್ನು ಖರೀದಿಸುವುದು ಖಂಡಿತವಾಗಿಯೂ ಬುದ್ದಿವಂತಿಕೆಯೇ ಸರಿ.