Rajinikanth: ರಜನಿ ಮನೆಯ ಕಳ್ಳತನಕ್ಕೆ ಹೊಸ ಟ್ವಿಸ್ಟ್, ಸ್ವಂತ ಮಗಳನ್ನೇ ವಿಚಾರಣೆಗೆ ಕರೆದ ಪೊಲೀಸರು
ಸೂಪರ್ ಸ್ಟಾರ್ ರಜನಿಕಾಂತ್ (Rajinikanth )ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ( Aishwarya Rajanikant ) ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯೂ ಬಿರುಸಿನಿಂದ ನಡೆಯುತ್ತಿದ್ದು, ನಿರ್ದೇಶಕಿ ಐಶ್ವರ್ಯ ಅವರನ್ನೇ ವಿಚಾರಣೆ ನಡೆಸಲಿದ್ದಾರೆ ಎನ್ನುವ ಮಾಹಿತಿಯೂ ಮೂಲಗಳಿಂದ ಹೊರ ಬಿದ್ದಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆ ಕೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಕಾರು ಚಾಲಕ ವೆಂಕಟೇಶನು ಈ ಕಳ್ಳತನ ಮಾಡಲು ಕುಮ್ಮಕ್ಕು ನೀಡಿದ್ದು, ಮನೆಗೆಲಸದಾಕೆ ಈ ಈಶ್ವರಿ ಸುಮಾರು 100 ಗ್ರಾಂ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ಕದ್ದಿದ್ದಾಳೆ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಮನೆ ಖರೀದಿಗೆ ಉಪಯೋಗಿಸಿಕೊಂಡಿದ್ದಾಳೆ. ಅದರ ಜೊತೆಗೆ ಈ ಹಣದಿಂದ ಕೆಲವು ವಸ್ತುಗಳನ್ನು ಖರೀದಿಸಲು ಬಳಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿನ್ನಾಭರಣ ನಾಪತ್ತೆ ಬಗ್ಗೆ ದೂರು ನೀಡಿದ್ದ ರಜನಿಕಾಂತ್ ಪುತ್ರಿ:
ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಲಾಕರ್ನಿಂದ ಬೆಲೆಬಾಳುವ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಐಶ್ವರ್ಯಾ ರಜನಿಕಾಂತ್ ಮನೆಯ ಬಗ್ಗೆ ಚೆನ್ನಾಗಿ ಅರಿತಿದ್ದ ಮನೆ ಕೆಲಸದಾಕೆ
ಕಳೆದ 18 ವರ್ಷಗಳಿಂದ, ಐಶ್ವರ್ಯಾ ರಜನಿಕಾಂತ್ ಅವರ ಮನೆಯಲ್ಲಿ ಈಶ್ವರಿ ಕೆಲಸ ಮಾಡುತ್ತಿದ್ದಳು. ಅವರ ಮನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಳು. ಕೀ ಇರುವ ಸ್ಥಳವನ್ನು ಈಶ್ವರಿಗೆ ಗೊತ್ತಿತ್ತು. ಈಗಾಗಲೇ ಅನೇಕ ಬಾರಿ ಈಶ್ವರಿ ಕಳ್ಳತನ ಮಾಡಿದ್ದಳು. ಅನೇಕ ಬಾರಿ ಸ್ವಲ್ಪ ಸ್ವಲ್ಪವಾಗಿ ಆಭರಣಗಳನ್ನು ಕದ್ದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ಆರೋಪಿಯ ವಿಚಾರಣೆ:
ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದಾಗ ಆರೋಪಿಯನ್ನು ಮೈಲಾಪುರದ ವಿನಾಲಕ್ ಶಂಕರ್ ನವಲಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯೂ ಈಶ್ವರಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ. ಈ ವಿನಾಲಕ್ ಶಂಕ ನವಲಿಯಿಂದ ಒಟ್ಟು 340 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಈಗಾಗಲೇ ಈ ಬಂಧಿತ ಆರೋಪಿಯಾಗಿರುವ ಈಶ್ವರಿ ಅವರು ವೆಂಕಟೇಶನಿಗೆ 9 ಲಕ್ಷ ರೂ. ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ವೆಂಕಟೇಶನ ಬಳಿ ಹಣವಿದೆಯಾ ಎನ್ನುವುದನ್ನು ತನಿಖೆ ನಡೆಸಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಈಶ್ವರಿ ತನ್ನ ಪತಿಯ (Angamuthu) ಬ್ಯಾಂಕ್ ಖಾತೆ ಮೂಲಕ 350 ಗ್ರಾಂ ಚಿನ್ನಾಭರಣವನ್ನು ಅಡ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಐಶ್ವರ್ಯಾರವರನ್ನು ವಿಚಾರಣೆ ನಡೆಸಲಿರುವ ಪೊಲೀಸರು:
ಈಗಾಗಲೇ ಕಳವು ಆಗಿರುವ ಈ ಚಿನ್ನಾಭರಣಗಳ ಖರೀದಿ ರಶೀದಿ ಸೇರಿದಂತೆ ದಾಖಲೆಗಳ ಬಗ್ಗೆ ನಿರ್ದೇಶಕಿ ಐಶ್ವರ್ಯಾ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಐಶ್ವರ್ಯರವರು ದೂರಿನಲ್ಲಿ ಉಲ್ಲೇಖಿಸಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತ ಐಶ್ವರ್ಯಾ ಅವರ ಮನೆಗೆ ಹೋಗಿ ಅಥವಾ ಅವರನ್ನು ಕರೆಸಿಕೊಂಡು ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆಯ ವೇಳೆ ಏನೆಲ್ಲಾ ಮಾಹಿತಿಗಳು ಹೊರ ಬೀಳಲಿದೆ ಎನ್ನುವುದು ಕಾದು ನೋಡಬೇಕು.