ಚಂದ್ರನ ನೆಲದಲ್ಲಿ ಅದರಲ್ಲೂ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ – 3 ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೇಲೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಹಲವಾರು ನಾಯಕರು ಭಾರತವನ್ನು ಈ ಸಾಧನೆಗೆ ಅಭಿನಂದಿಸಿದ್ದಾರೆ. ಚಂದ್ರನ ನೆಲದ ಮೇಲೆ ಇಳಿದ ನಾಲ್ಕನೇ ದೇಶ ಭಾರತವಾಗಿದೆ. ಭಾರತ ಈ ರೀತಿಯ ಸಾಧನೆ ಮೆರೆದಾಗ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾಮಾನ್ಯ. ಅದೂ ಅಲ್ಲದೇ ಪಾಕಿಸ್ತಾನ (Pakistan) ದ ಸುತ್ತ ಮುತ್ತ ಇರುವ ಚೀನಾ ಮತ್ತು ರಷ್ಯಾ ಕೂಡ ಈ ಸಾಧನೆಯನ್ನು ಈಗಾಗಲೇ ಮಾಡಿ ಆಗಿದೆ.
ಪಾಕಿಸ್ತಾನ (Pakistan) ಯಾವಾಗ ಚಂದ್ರನ ಮೇಲೆ ತನ್ನ ಮಿಷನ್ ಅನ್ನು ಲಾಂಚ್ ಮಾಡುತ್ತದೆ ಎಂಬುದನ್ನು ಅಲ್ಲಿನ ಪತ್ರಕರ್ತರೊಬ್ಬರು ವೀಡಿಯೋ ಮಾಡಿದ್ದು ಈಗ ವೈರಲ್ ಆಗಿದೆ. ಪಾಕಿಸ್ತಾನದ ನೆರೆಯ ರಾಷ್ಟ್ರ ಇಂತಹುದೊಂದು ಸಾಧನೆ ಮಾಡಿದಾಗ ಪಾಕಿಸ್ತಾನವೂ ಇದೇ ಲಿಸ್ಟ್ ನಲ್ಲಿ ಬರಬೇಕು ಎನ್ನುವ ಬಯಕೆ ಸಾಮಾನ್ಯ. ಇಸ್ರೋ ಗಿಂತ ಎಂಟು ವರ್ಷಗಳ ಮೊದಲೇ ಸುಪಾರ್ಕೋ (ಪಾಕಿಸ್ತಾನದ ಸ್ಪೇಸ್ ಏಜೆನ್ಸಿ) ಆರಂಭವಾಗಿಯೂ ಇಸ್ರೋ ದಂತಹ ಸಾಧನೆ ನಡೆದಿಲ್ಲ.
ಚಂದ್ರಯಾನದಂತಹ ಸಾಧನೆ ಮಾಡುವ ಮೊದಲು ಪಾಕಿಸ್ತಾನ (Pakistan) ದಲ್ಲಿರುವ ಬೇರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಒಂದೇ ಒಂದು ಸಮಸ್ಯೆಯನ್ನು ತೆಗೆದುಕೊಂಡರೆ ಅದು ವಿದ್ಯುತ್ ನ ಕೊರತೆ ಮತ್ತು ಕಳ್ಳತನ. ಪಾಕಿಸ್ತಾನ (Pakistan) ತನಗೆ ಬೇಕಾಗಿರುವಷ್ಟು ವಿದ್ಯುತ್ ಅನ್ನು ತಯಾರಿಸುತ್ತಿದೆ. ಆದರೆ ಇದು ಜನರನ್ನು ಸೇರುತ್ತಿಲ್ಲ. ಪ್ಲಾಂಟ್ ನಿಂದ ಮನೆಗಳಿಗೆ ವಿದ್ಯುತ್ ತಲುಪುವ ನಡುವಲ್ಲೇ ವಿದ್ಯುತ್ ಕಳ್ಳತನ ನಡೆಯುತ್ತಿದೆ. ಹಳೆಯ ವೈರುಗಳು ಮತ್ತು ಅಲ್ಲಲ್ಲಿ ವಿದ್ಯುತ್ ಕಂಬಗಳಿಂದ ಜನರು ಅಕ್ರಮವಾಗಿ ವಿದ್ಯುತ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಇದನ್ನು ಸರಿಯಾಗಿ ಪತ್ತೆಹಚ್ಚಲು ಮತ್ತು ನಿರ್ವಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ.
ಇದರ ಜೊತೆಗೆ ಸರ್ಕಾರ ಒಂದು ವರ್ಗದ ಜನರಿಗೆ ಉಚಿತ ವಿದ್ಯುತ್ ಅನ್ನೂ ಹಂಚುತ್ತಿದೆ. ಯಾರೆಲ್ಲಾ ಈ ತರಹ ಉಚಿತ ವಿದ್ಯುತ್ ಪಡೆಯುತ್ತಿಲ್ಲವೋ ಅವರು ತಯಾರಿಸಲಾದ ಎಲ್ಲಾ ವಿದ್ಯುತ್ ನ ದರವನ್ನು ನೀಡಬೇಕಾಗಿ ಬಂದಿದೆ. ಒಂದು ತಿಂಗಳಪೂರ್ತಿ ಮನಯೆಲ್ಲೇ ಇಲ್ಲದವರಿಗೂ ಐವತ್ತು ಸಾವಿರದ ವಿದ್ಯುತ್ ಬಿಲ್ ಬರುತ್ತಿದೆ ಅಂದರೆ ಯಾವ ರೀತಿಯ ಹೊರೆಯನ್ನು ಒಂದು ವರ್ಗದ ಜನ ಹೊರುತ್ತಿದ್ದಾರೆ ಎಂಬ ಊಹೆ ಮಾಡಬಹುದು.
ಇದರ ಜೊತೆಗೆ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಕಳೆದ ಮೂರು ವರ್ಷಗಳಲ್ಲಿ ಎರಡು ಪಟ್ಟು ಇಳಿದಿದೆ. ಇದರ ಜೊತೆಗೆ ಆಡಳಿತದಲ್ಲಾದ ಬದಲಾವಣೆಗಳು, ಕಳೆದ ವರ್ಷ ಬಂದ ನೆರೆ, ಆರ್ಥಿಕ ಕುಸಿತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದೆ. ಪಾಕಿಸ್ತಾನದ ಪತ್ರಕರ್ತ ಇವೆಲ್ಲಾ ಸಮಸ್ಯೆಗಳನ್ನು ಉಲ್ಲೇಖಿಸದೇ ಸಣ್ಣದು ಎನ್ನಬಹುದಾದ ವಿದ್ಯುತ್ ಸಮಸ್ಯೆಯೇ ಪಾಕಿಸ್ತಾನವನ್ನು ಇಷ್ಟರ ಮಟ್ಟಿಗೆ ಬಾಧಿಸುತ್ತಿದೆ ಹೀಗಾಗಿ ಈ ಸಮಸ್ಯೆಗಳು ಬಗೆಹರಿದ ಕೂಡಲೆ ಪಾಕಿಸ್ತಾನವೂ ಚಂದ್ರನ ಅಂಗಳದಲ್ಲಿಇಳಿಯಲಿದೆ ಭಾರತ ಲ್ಯಾಂಡ್ ಮಾಡಿದ ಪಕ್ಕದಲ್ಲೇ ಇಳಿದು ಅಲ್ಲಿಯೂ ಇನ್ನೊಂದು ವಾಘಾ ಅಥವಾ ಸಿಯಾಚಿನ್ ಅನ್ನು ಸೃಷ್ಟಿಸೋಣ ಎಂದಿದ್ದಾರೆ.