ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಅಬಕಾರಿ ಹಗರಣದ ವಿಚಾರದಲ್ಲಿ ಬಂಧಿಸಿ ಜೈಲಿನಲ್ಲಿರಿಸಿದಾಗಿನಿಂದ, ರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಕೆಲವರು ಕೇಂದ್ರ ಸರ್ಕಾರ ಸೋಲಿನ ಭಯದಿಂದ ಈ ಸಂಚು ಮಾಡಿದೆ ಎಂದರೆ, ಇನ್ನು ಕೆಲವರು ಎಂದೋ ಆಗಬೇಕಾದ ಕೆಲಸ ಈಗ ಆಗುತ್ತಿದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ದೆಹಲಿಯ ರಾಜಕಾರಣದಲ್ಲಿ ಇದೀಗ ಹೊಸತೊಂದು ಶಕೆ ಆರಂಭವಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೇನಾ (Atishi Marlena) ಅಧಿಕಾರ ಸ್ವೀಕರಿಸಿದ್ದಾರೆ.
ಹೌದು. ಜೈಲಿನಲ್ಲಿದ್ದ ಅರವಿಂದ ಕೇಜ್ರಿವಾಲ್, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಜೈಲಿನಲ್ಲಿದ್ದುಕೊಂಡೇ ತನ್ನ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಕೇಜ್ರಿವಾಲ್, ಅಲ್ಲಿನಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದರು. ಅವರ ಪಕ್ಷದ ಸದಸ್ಯರು ಕೂಡ, ಕೇಜ್ರಿವಾಲ್ ಅವರು ಯಾವಾಗ ಜೈಲಿನಿಂದ ಹೊರಗಡೆ ಬರುತ್ತಾರೆ ಎನ್ನುವುದನ್ನೇ ಕಾದು ಕುಳಿತಿದ್ದರು. ಅಂತೆಯೇ, ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ನೀಡುತ್ತಿದ್ದಂತೆಯೇ, ಹೊರಬಂದ ಕೇಜ್ರಿವಾಲ್ ಕೇವಲ 48 ಗಂಟೆಗಳಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ದೊಡ್ಡ ರಾಜಕೀಯ ಬಾಂಬ್ ಸಿಡಿಸಿದ್ದರು. ಅಂತೆಯೇ ರಾಜೀನಾಮೆಯನ್ನೂ ನೀಡಿದ ಕೇಜ್ರಿವಾಲ್, ಮುಂದಿನ ಸಿಎಂ ಆಗಿ ಆಯ್ಕೆ ಮಾಡಿದ್ದು, ತನ್ನ ಪಕ್ಷದ ಹಾಗೂ ಸರ್ಕಾರದ ಎಲ್ಲಾ ಕಾರ್ಯಚಟುವಟಿಕೆಗಳಿಗೂ ಬೆಂಬಲವಾಗಿ ನಿಂತಿದ್ದ ಅತಿಶಿ (Atishi Marlena) ಯನ್ನು!
Atishi Marlena ಸಿಎಂ ಆಗಿ ಆಯ್ಕೆ ಆಗಿದ್ದು ಏಕೆ?
ಹೌದು. ಅರವಿಂದ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವ್ಯವಹಾರದ ಮೇಲೆ ಮಾರ್ಚ್ 21 ರಂದು ಅರೆಸ್ಟ್ ಮಾಡಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಸರ್ಕಾರ ಅತಂತ್ರವಾದರೂ ದೆಹಲಿ ಸಿಎಂ ಪಟ್ಟಕ್ಕೆ ರಾಜೀನಾಮೆ ನೀಡದ ಕೇಜ್ರಿವಾಲ್, ಮುಂದಿನ ಕಾರ್ಯತಂತ್ರಗಳನ್ನು ಜೈಲಿನಿಂದಲೇ ರೂಪಿಸುತ್ತಿದ್ದರು ಎನ್ನಲಾಗಿದೆ. ಅಂತೆಯೇ, ತಾನು ಜೈಲಿನಿಂದ ಹೊರಬಂದ 48 ಗಂಟೆಗಳೊಳಗೆ ರಾಜೀನಾಮೆ ನೀಡಿದ ಕೇಜ್ರಿವಾಲ್, ತನಗೆ ಎಲ್ಲಾ ಪರಿಸ್ಥಿತಿಗಳಲ್ಲೂ ಬೆಂಬಲಕ್ಕೆ ನಿಂತಿದ್ದ ಏಕೈಕ ವ್ಯಕ್ತಿ, ದೆಹಲಿ ಸರ್ಕಾರದಲ್ಲಿ ಶಿಕ್ಷಣ, ಲೋಕೋಪಯೋಗಿ ಹಾಗೂ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವೆಯಾಗಿದ್ದು, ಆಮ್ ಆದ್ಮಿ ಪಾರ್ಟಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯೆಯೂ ಆಗಿದ್ದ ಅತಿಶಿ ಮರ್ಲೇನಾ ಅವರನ್ನು ಸಿಎಂ ಎಂದು ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು.
ಅಂತೆಯೇ, ದೆಹಲಿಯ ನೂತನ ಸಿಎಂ ಆಗಿ ಘೋಷಣೆಯಾದ ನಂತರ ಪತ್ರಿಕಾಗೋಷ್ಟಿಯ ಮೂಲಕ ಕಾರ್ಯನೀತಿಗಳನ್ನು ವ್ಯಕ್ತಪಡಿಸಿದ ಅತಿಶಿ, ಇಂದು ದೆಹಲಿಯ ನೂತನ ಸಿಎಂ ಆಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Atishi Marlena ದೆಹಲಿಯ ಅತ್ಯಂತ ಕಿರಿಯ ಸಿಎಂ!
43 ವರ್ಷ ವಯಸ್ಸಿನ ಅತಿಶಿ ಮರ್ಲೇನಾ, ಸಾಕಷ್ಟು ರಾಜಕೀಯ ಅನುಭವ ಕೂಡ ಹೊಂದಿದ್ದಾರೆ. ಅದರೊಂದಿಗೆ, ಎರಡು ನೂತನ ದಾಖಲೆಗಳನ್ನೂ ಬರೆದಿದ್ದಾರೆ. ದೆಹಲಿಯ ಸಿಎಂ ಗದ್ದುಗೆ ಏರಿದ ಅತ್ಯಂತ ಕಿರಿಯ ರಾಜಕಾರಣಿ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ, ದೆಹಲಿಯಲ್ಲಿ ಸಿಎಂ ಪಟ್ಟ ಅಲಂಕರಿಸಿದ ಮೂರನೇ ಮಹಿಳೆ ಎನ್ನುವ ಖ್ಯಾತಿಗೂ ಅತಿಶಿ (Atishi Marlena) ಪಾತ್ರರಾಗಿದ್ದಾರೆ.
ಈ ಹಿಂದೆ ದೆಹಲಿ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಅವರು, ತನ್ನ 45ನೇ ವರ್ಷದಲ್ಲಿ ಮುಖ್ಯಮಂತ್ರಿಯಾಗಿ, ಈವರೆಗಿನ ದೆಹಲಿಯ ಅತಿ ಕಿರಿಯ ಸಿಎಂ ಎನ್ನುವ ಹೆಗ್ಗಳಿಕೆ ಹೊಂದಿದ್ದರು. ಆದರೆ, ಇದೀಗ ಅವರ ದಾಖಲೆ ಮುರಿದಿರುವ ಅತಿಶಿ, ಸುಷ್ಮಾ ಸ್ವರಾಜ್ ಹಾಗೂ ಶೀಲಾ ದೀಕ್ಷಿತ್ ಅವರ ನಂತರ ದೆಹಲಿ ಸಿಎಂ ಗದ್ದುಗೆಗೇರಿದ ಮೂರನೇ ಮಹಿಳಾ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿವಾದಗಳಲ್ಲೂ ಈಕೆ ಎತ್ತಿದಕೈ!
ಆದರೆ, ಅತಿಶಿ (Atishi Marlena) ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ವಿವಾದಗಳನ್ನು ಎದುರಿಸಿದ್ದು, ತನ್ನ ಮರ್ಲೇನಾ ಎನ್ನುವ ಸರ್ನೇಮ್ ವಿಚಾರ ಹಾಗೂ ಕುಖ್ಯಾತ ದೇಶದ್ರೋಹಿ ಅಫ್ಜಲ್ ಗುರುವಿಗೆ ಮರಣದಂಡನೆ ಶಿಕ್ಷೆಯನ್ನು ತಪ್ಪಿಸಬೇಕು ಎನ್ನುವ ಈಕೆಯ ಹೆತ್ತವರ ಮೇಲಿನ ಆರೋಪದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ಇದೆಲ್ಲವನ್ನೂ ಮೀರಿ ಇಂದು ದೆಹಲಿಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಅತಿಶಿ ಅವರ ಮುಂದಿನ ನಡೆಗಳೇನು ಎನ್ನುವುದನ್ನು ಕಾದು ನೋಡಬೇಕಿದೆ.