ಕಲಿಯುಗದ ಪಾಪ ತೊಳೆಯುವ ಪಾಪವಿನಾಶಕ ಕ್ಷೇತ್ರವಾದ ತಿರುಪತಿ ಶ್ರೀ ತಿಮಪ್ಪನ (Tirupathi) ದರ್ಶನ ಪಡೆಯಲು ಅದೆಷ್ಟೋ ಸಮಯಗಳಿಂದ ಜನ ಬರುತ್ತಾರೆ . ಪ್ರತ್ಯಕ್ಷ ವೆಂಕಟೇಶ ದೇವರನ್ನೇ ನೋಡಿದ ಅನುಭವ ನೀಡುವ ತಿರುಪತಿಗೆ ದಿನೇ ದಿನೇ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯೇ ಆಗುತ್ತಿದೆ. ಪಾದಯಾತ್ರೆ, ವಿಶೇಷ ದರ್ಶನ, ಆನ್‌ಲೈನ್ ಬುಕಿಂಗ್, ಕ್ಯೂ ದರ್ಶನ ಹೀಗೆ ಹಲವು ರೀತಿಯ ದರ್ಶನಗಳನ್ನು ಪಡೆಯುವ ಎಲ್ಲಾ ಭಕ್ತರಿಗೆ ತಿರುಪತಿಯಲ್ಲಿ ಸಿಗುವ ಅತ್ಯುತ್ತಮ ಪ್ರಸಾದ ತಿರುಪತಿ ಲಡ್ಡು (Tirupati Laddu). ಇದೀಗ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ತಿರುಪತಿ ಲಡ್ಡು ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದು ನೋಡೋಣ ಬನ್ನಿ.
![CM Chandrababu Naidu Accuses Ex-CM Jagan using Animal Fat](https://karnatakatimes.com/wp-content/uploads/2024/09/Tirupati-Laddu-300x157.jpg)
ಲಕ್ಷಾನುಗಟ್ಟಲೆ ಭಕ್ತರು ಕೋಣೆಯಂತಹ ಕ್ಯೂನಲ್ಲಿ ಕಾದು ಕಾದು ನಂತರ ರಾತ್ರೋರಾತ್ರಿ ಅಥವಾ ನಸುಬೆಳಕಿನ ಜಾವವೇ ಒಮ್ಮೆಗೇ ಕ್ಯೂ ಬಾಗಿಲು ತೆರೆದಾಗ, ನೂಕುನುಗ್ಗಲಿನ ನಡುವೆಯೇ ಶ್ರೀ ವಾರಿ ವೆಂಕಟೇಶನ ದರ್ಶನ ಪಡೆಯಲು ಮುಗಿಬಿದ್ದು ದೇವರ ದರ್ಶನ ಪಡೆದಾಗ ವ್ಯಕ್ತಪಡಿಸುವ ಆನಂದವೇ ಬೇರೆ. ಅದರೊಂದಿಗೆ, ದರ್ಶನದ ನಂತರ ತಮ್ಮ ತಮ್ಮ ಕಾಣಿಕೆಗಳನ್ನು ದೇವರಿಗೆ ಅರ್ಪಿಸಿ ಪಾಪ ತೊಳೆದುಕೊಳ್ಳುವ ಜನರಿಗೆ ಲಡ್ಡು ಪ್ರಸಾದ (Tirupati Laddu) ಅತ್ಯಂತ ಖುಷಿ ಕೊಡುತ್ತದೆ. ಆದರೆ, ಅದೇ ಲಡ್ಡುಪ್ರಸಾದದ ಬಗ್ಗೆ ಆಂಧ್ರ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಇಡೀ ಭಕ್ತ ವಲಯದಲ್ಲಿ ಭಯ ಹುಟ್ಟುಹಾಕಿದೆ.
ತಿರುಪತಿ ಲಡ್ಡು ಬಗ್ಗೆ ಚಂದ್ರಬಾಬು ನಾಯ್ಡು ಆರೋಪವೇನು?
ಹೌದು. ಕೋಟ್ಯಾಂತರ ಭಕ್ತರಿಗೆ ಪ್ರಸಾದವಾಗಿದ್ದ ತಿರುಪತಿ ಲಡ್ಡುವಿನ ತಯಾರಿಕೆಗೆ ಹಿಂದೆ ವೈಎಸ್ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ಅವರ ಆಡಳಿತದಲ್ಲಿ ಪ್ರಾಣಿಗಳ ಕೊಬ್ಬು (Animal Fat) ಬಳಸಲಾಗುತ್ತಿತ್ತು ಎನ್ನುವ ಗಂಭೀರ ಆರೋಪವನ್ನು ಚಂದ್ರಬಾಬು ನಾಯ್ಡು ಮಾಡಿದ್ದಾರೆ. ಈ ಆರೋಪ ಸಾರ್ವಜನಿಕ ವಲಯದಲ್ಲಿ ಬಹಳ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ನಿನ್ನೆ ಬುಧವಾರ ನಡೆದ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಹೊಸ ಬಾಂಬ್ ಸಿಡಿಸಿದ್ದು, ಹಿಂದಿನ ಸಿಎಂ ಜಗನ್ ಆಡಳಿತದಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೆ ಜಗನ್ ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ ಇಡೀ ತಿರುಮಲ ದೇವಾಲಯ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅವರು ಅನ್ನದಾನದ ಸಂಪೂರ್ಣ ಗುಣಮಟ್ಟ ಕೆಡಿಸಿದ್ದಲ್ಲದೇ, ಲಡ್ಡು (Tirupati Laddu) ತಯಾರಿಕೆಗೆ ಶುದ್ಧ ತುಪ್ಪದ ಬದಲಿಗೆ ಹಸುವಿನ ಅಥವಾ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು. ನಾವು ಅದನ್ನು ಸಂಪೂರ್ಣವಾಗಿ ಬಂದ್ ಮಾಡಿ, ಶುದ್ಧ ತುಪ್ಪವನ್ನಷ್ಟೇ ಬಳಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ನಾಯ್ಡು ಆರೋಪಕ್ಕೆ ಪುಷ್ಟಿ ನೀಡಿದ ಕೆ.ಎಂ.ಎಫ್ ಅಧ್ಯಕ್ಷರ ಹೇಳಿಕೆ?
ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆಗೆ ಪುಷ್ಟಿ ನೀಡುವಂತೆ, ಕೆ.ಎಂ.ಎಫ್ (KMF) ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಅವರ ಹೇಳಿಕೆಯೂ ಆ ಆರೋಪಕ್ಕೆ ಸರಿಹೊಂದುವಂತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ನಾವು ಕೆ.ಎಂ.ಎಫ್‌ನಿಂದ ತುಪ್ಪ ಪೂರೈಕೆ ಮಾಡಿಲ್ಲ. ಕಳೆದ ವರ್ಷ ತುಪ್ಪ ಪೂರೈಕೆಯನ್ನು ನಾವು ಮರು ಆರಂಭಿಸಿದ್ದು, ಅಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಥವಾ ವಿವಾದಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಕೇವಲ ತುಪ್ಪವನ್ನಷ್ಟೇ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ.
ಆರೋಪ ಸಾಬೀತಾದರೆ ಮುಂದಿನ ಗತಿ?
ಲಡ್ಡು (Tirupati Laddu) ತಯಾರಿಕೆಗಾಗಿ 3 ಲಕ್ಷದ 50 ಸಾವಿರ ಕೆ.ಜಿ ತುಪ್ಪ ಪೂರೈಕೆಗೆ ಕೆ.ಎಂ.ಎಫ್‌ಗೆ ಟೆಂಡರ್ ನೀಡಲಾಗಿದ್ದು, ಸಾಕಷ್ಟು ಮೊತ್ತದ ತುಪ್ಪವನ್ನು ತಿರುಪತಿಗೆ ನಂದಿನಿ ಬ್ರಾಂಡ್ ಪೂರೈಸುತ್ತಿದೆ. ಆದರೆ, ಚಂದ್ರಬಾಬು ನಾಯ್ಡು ಅವರ ಈ ಆರೋಪ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅಥವಾ ಹಿಂದೆ ಇದ್ದ ಜಗನ್ ಸರ್ಕಾರದ ಅವಧಿಯಲ್ಲಿ ಈ ಅಕ್ರಮ ನಡೆದಿದ್ದು ಸಾಬೀತಾದರೆ, ಅದರ ವಿರುದ್ದ ಏನೇನು ಕ್ರಮಗಳಾಗಬಹುದು ಎನ್ನುವುದನ್ನು ಕಾದುನೋಡಬೇಕಿದೆ.
ಆದರೆ, ಈ ಆರೋಪ ನಿಜವೇ ಆದಲ್ಲಿ, ತಿರುಪತಿಯ ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆಯಾಗುವುದಂತೂ ಖಂಡಿತ.