ಕಾರ್ಕಳದ ಹೆಸರನ್ನು ರಾಷ್ಟ್ರಾದ್ಯಂತ ಪಸರಿಸಬಲ್ಲಂತ, ಕಾರ್ಕಳವನ್ನು ಶ್ರೇಷ್ಠ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಬದಲಾಯಿಸಬಹುದಾಗಿದ್ದ ʼಪರಶುರಾಮ ಥೀಮ್ ಪಾರ್ಕ್ʼ ಇಂದು ರಾಜಕಾರಣದ ಷಡ್ಯಂತ್ರ, ಕುತಂತ್ರಕ್ಕೆ ಸೊರಗಿ ಸುಣ್ಣವಾಗಿದೆ. ಕಾರ್ಕಳದ ಹಾಗೂ ಬೈಲೂರಿನ ಅಭಿವೃದ್ಧಿಯ ವಿಷಯದಲ್ಲಿ, ಪ್ರವಾಸೋದ್ಯಮದ ವಿಷಯದಲ್ಲಿ ಕರಾಳ ರಾಜಕಾರಣದ ಕಾರ್ಮೋಡ ಕವಿದಿರುವುದು ದುಸ್ಸಂಗತಿಯೇ ಸರಿ.
ಕಾರ್ಕಳದ ಕನಸಿನ ಪರಶುರಾಮ ಥೀಮ್ ಪಾರ್ಕ್ ಯೋಜನೆ ಲೋಕಾರ್ಪಣೆಗೊಂಡು ಇಂದಿಗೆ ಸಂಪೂರ್ಣ 2 ವರ್ಷ ಸಂದಿದೆ. ಜನಾಕರ್ಷಣೆಯ ಪ್ರವಾಸೋದ್ಯಮ ತಾಣವಾಗಿ ಕಂಗೊಳಿಸಿದ್ದ ಬೇಕಿದ್ದ ಈ ಸ್ಥಳ ಪಾಳು ಬಿದ್ದಿದ್ದು, ಆಳುವ ಸರ್ಕಾರದ ದುಸ್ಥಿತಿಯ ಕೈಗನ್ನಡಿಯಾಗಿ ತೋರುತ್ತಿದೆ. ಪರಶುರಾಮನ ಕೀರ್ತಿಯನ್ನು ಜಗದಗಲ ಹೆಚ್ಚಿಸಬೇಕಿದ್ದ ಕೋಟ್ಯಾಂತರ ರೂ.ಗಳ ಈ ಯೋಜನೆಗೆ ಕೊಡಲಿ ಪೆಟ್ಟು ಬಿದ್ದಿದೆ.
ಕಾರ್ಕಳದ ಶಾಸಕರು ಹಾಗೂ ಅಂದಿನ ಸಚಿವರಾಗಿದ್ದ ಶ್ರೀ ಸುನಿಲ್ ಕುಮಾರ್ ಅವರ ಮುತುವರ್ಜಿಯಿಂದ ಕಾರ್ಕಳ-ಬೈಲೂರು ಹೆದ್ದಾರಿಯ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ಅನ್ನು 14 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಈ ಪ್ರವಾಸಿ ತಾಣವನ್ನು ಉದ್ಘಾಟನೆ ಮಾಡಿ, ಸಚಿವರ ಕೆಲಸಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿದಿದ್ದರು.
ಆದರೆ, ಅನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲಿ ನೇರ ರಾಜಕಾರಣಕ್ಕೆ ಇಳಿದಿದೆ. ಪರಶುರಾಮರ ಮೂರ್ತಿಯ ವಿಷಯದಲ್ಲಿ ತಕರಾರು ತೆಗೆದು, ಕಾಮಗಾರಿಯ ತನಿಖೆಯನ್ನು ಸಿಐಡಿ ವಿಚಾರಣೆಗೆ ನೀಡಿತ್ತು. ಸಿಐಡಿ ವಿಚಾರಣೆ ಆರಂಭವಾಗಿ 2 ವರ್ಷ ಕಳೆದರೂ ಗುಲಗಂಜಿಯಷ್ಟು ಭ್ರಷ್ಟಾಚಾರವನ್ನು ಸಾಬೀತುಮಾಡಲಾಗಿಲ್ಲ ಹಾಗೂ ಸಮಿತಿ ಒಂದೇ ಒಂದು ಪತ್ರಿಕಾ ಹೇಳಿಕೆ ನೀಡಿಲ್ಲ, ವರದಿಯನ್ನೂ ನೀಡಿಲ್ಲ. ಈ ಪ್ರಕರಣದ ಕುರಿತಂತೆ ಮುಂದಿನ 2024ರ ಮೇ 03ರಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಮೂಮದಿನ 4 ತಿಂಗಳುಗೊಳ ಒಳಗಾಗಿ ಪರಶುರಾಮರ ಮೂರ್ತಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆದೇಶ ನೀಡಿದೆ.
ರಾಜಕಾರಣವೆಂಬ ಷಡ್ಯಂತ್ರದ ಸಾಗರದಲ್ಲಿ ಈಜುತ್ತಿರುವ ಸರ್ಕಾರಕ್ಕೆ ಈ ಯಾವ ಆದೇಶಗಳು ತಲೆಗೆ ಹತ್ತಿದಂತಿಲ್ಲ. ಕೇವಲ ಸುಳ್ಳು ಆರೋಪಕ್ಕಷ್ಟೇ ಥೀಮ್ ಪಾರ್ಕ್ ಬಲಿಯಾಗಿದೆ. ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಂತೂ ಕಳೆದು ಒಂದೂವರೆ ವರ್ಷದಿಂದ ಈ ವಿಷಯದ ಬಗ್ಗೆ ಬಾಯಿಯನ್ನೇ ಬಿಟ್ಟಿಲ್ಲ.
ರಾಜ್ಯ ಸರ್ಕಾರ ಪರಶುರಾಮ ಮೂರ್ತಿ ನಿರ್ಮಾಣದ ಹಣವನ್ನು ತನ್ನ ಬಳಿಯೇ ಉಳಿಸಿಕೊಂಡು ಉಡುಪಿ ಹಾಗೂ ರಾಜ್ಯ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿತಾ? ಶಾಸಕ ಸುನಿಲ್ ಕುಮಾರ್ ಅವರನ್ನು ಹಣಿಯಲು ಈ ಕಾಮಗಾರಿಯನ್ನು ಗುರಾಣಿಯನ್ನಾಗಿ ಬಳಸಿಕೊಂಡಿತಾ? ಎನ್ನುವ ಪ್ರಶ್ನೆಗಳು ಜನತೆಯಲ್ಲಿ ಮೂಡಿವೆ.
ಪರಶುರಾಮರ ಪ್ರತಿಮೆ ಕಾಮಗಾರಿ ಬಾಕಿ!
ಉಮಿಕಲ್ ಬೆಟ್ಟದ ಮೇಲಿನ 33 ಅಡಿ ಕಂಚಿನ ಪರಶುರಾಮ ಮೂರ್ತಿ (10 ಅಡಿ ಕಾಂಕ್ರಿಟ್ ಬೆಡ್ ಸೇರಿಸಿ) ನಿರ್ಮಾಣಕ್ಕೆ 2,04,96,000/- ರೂ. ಮೊತ್ತವನ್ನು ಮೀಸಲಿಡಲಾಗಿದ್ದು, ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ 1.83 ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯವಾಗಿದೆ. 79,46,000 ರೂ.ಗಳ ವೆಚ್ಚದ ಮೂರ್ತಿಯ ಕಾಮಗಾರಿ ಬಾಕಿಯಿದ್ದು, ಈ ಮೊತ್ತದ ಕಾಮಗಾರಿ ಮುಕ್ತಾಯಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಕಾಮಗಾರಿ ಆರಂಭಿಸುವಂತೆ ಶಿಲ್ಪಿಗಳಿಗೂ ಆದೇಶ ನೀಡದಿರುವುದು ವ್ಯವಸ್ಥೆಯ ದುರಂತದ ಸಂಗತಿಯೇ ಸರಿ.
ಪರಶುರಾಮ ಥೀಮ್ ಪಾರ್ಕ್‌ಗೆ ಪ್ರವೇಶ ನಿರ್ಬಂಧಿಸಿ ಒಂದೂವರೆ ವರ್ಷವಾಗಿದೆ. ಮುಂದಿನ ಹಂತದ ಕಾಮಗಾರಿಗಳನ್ನು ನಿಲ್ಲಿಸಿ, ಕೋಟ್ಯಾಂತರ ರೂಪಾಯಿ ಯೋಜನೆ ಹಳ್ಳ ಹಿಡಿಯುವಂತಾಯಿತು. ಪ್ರವಾಸೋದ್ಯಮಕ್ಕೆ ಧಕ್ಕೆಯುಂಟು ಮಾಡಿ, ಈಗ ಬೆಟ್ಟಕ್ಕೆ ಹೋಗುವ ರಸ್ತೆ, ಅಳವಡಿಸಿದ ಆಸನಗಳು, ವಿದ್ಯುತ್ ದೀಪಗಳು, ಗ್ಯಾಲರಿ, ಆಡಿಟೋರಿಯಂ, ಕೊಠಡಿಗಳು ಧೂಳು ಹಿಡಿದು ಬಿಕೋ ಎನ್ನುತ್ತಿವೆ. ಸರ್ಕಾರ ಶೀಘ್ರವೇ ಥೀಮ್ ಪಾರ್ಕ್ ಅನ್ನು ಹಾಗೂ ಶೀಘ್ರವೇ ಪರಶುರಾಮ ಮೂರ್ತಿಯ ಕಾಮಗಾರಿ ಪೂರ್ಣಗೊಳಿಸಿ, ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಬೇಕೆನ್ನುವುದೇ ಕಾರ್ಕಳ ಜನರ ಒತ್ತಾಸೆಯಾಗಿದೆ.
This is a sponsored article/publish. Karnataka Times has no affiliation with the content of this article, and no journalist from Karnataka Times was involved in its creation. The views and opinions expressed herein are solely those of the sponsor