ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ 2024 (Paris Paralympics 2024) ರಲ್ಲಿ ಭಾರತಕ್ಕೆ ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ಗಿಂತ ಹೆಚ್ಚು ಪದಕಗಳು ಬರಬಹುದು ಎನ್ನುವ ನಿರೀಕ್ಷೆಯಿತ್ತು ಹಾಗೂ ಅದಕ್ಕಾಗಿ ಸರ್ಕಾರ ಎಲ್ಲಾ ಕ್ರೀಡಾಳುಗಳಿಗೂ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಬೆಂಬಲ ನೀಡಿತ್ತು. ಅಷ್ಟೇ ಅಲ್ಲದೇ, ಪ್ಯಾರಿಸ್ ಕ್ರೀಡಾಗ್ರಾಮದಲ್ಲಿ ಭಾರತೀಯ ಕ್ರೀಡಾಳುಗಳಿಗೆ ಎ.ಸಿ ಸೌಲಭ್ಯದ ಕೊರತೆಯಿತ್ತು ಎನ್ನುವುದನ್ನು ಮನಗಂಡು ಸರ್ಕಾರವೇ ಕ್ರೀಡಾಳುಗಳಿಗೆ ಎ.ಸಿ ವ್ಯವಸ್ಥೆಯನ್ನೂ ಮಾಡಿಕೊಟ್ಟಿತ್ತು.
ಆದರೆ, ಕಳೆದ ಬಾರಿಗಿಂತಲೂ ಅತ್ಯಂತ ಕಡಿಮೆ ಪದಕದೊಂದಿಗೆ ನೀರಸ ಪ್ರದರ್ಶನವವನ್ನು ನೀಡಿದ ಭಾರತದ ಒಲಿಂಪಿಕ್ ಕ್ರೀಡಾಳುಗಳ ತಂಡ ಕೇವಲ ಆರು ಪದಕಗಳೊಂದಿಗೆ ಯಾವುದೇ ಚಿನ್ನದ ಪದಕವಿಲ್ಲದೇ ಒಲಿಂಪಿಕ್ ಅಂತ್ಯಗೊಳಿಸಿದ್ದು, ಮರೆತುಬಿಡಬೇಕಾದ ಅನುಭವವೇ ಸರಿ.
ನೀರಸ ಪ್ರದರ್ಶನ ನೀಡಿದ್ದ ಭಾರತದ ಒಲಿಂಪಿಕ್ಸ್ ಕ್ರೀಡಾಳುಗಳು
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಫೇವರೀಟ್ ಎನಿಸಿದ್ದ ಪಿ.ವಿ.ಸಿಂಧೂ ಅವರಂತಹ ಕ್ರೀಡಾಪುಟುಗಳು ಟೂರ್ನಿ ಹಂತದಲ್ಲೇ ನಿರ್ಗಮಿಸಿದರೆ, ಫೈನಲ್ ಪ್ರವೇಶಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಅವರು 100 ಗ್ರಾಂ ತೂಕದ ವಿಚಾರದಲ್ಲಿ ಅನರ್ಹತೆಯ ವಿವಾದದೊಂದಿಗೆ ಕುಸ್ತಿ ಜೀವನದ ನಿವೃತ್ತಿಯನ್ನು ಘೋಷಿಸಿದ್ದು ಕಹಿಘಟನೆ. ಅದರೊಂದಿಗೆ ಹಿಂದೆ ಚಿನ್ನದ ಪದಕ ಖಚಿತಪಡಿಸಿದ್ದ ನೀರಜ್ ಪೋಪ್ರಾ ಪಾಕ್ ಸ್ಪರ್ಧಿ ಅರ್ಷದ್ ನದೀಂ ಅವರ ದಾಖಲೆಯ ಎಸೆತವನ್ನು ಮೀರಲಾಗದೇ ಬೆಳ್ಳಿಗೆ ತೃಪ್ತಿಪಟ್ಟರೆ, ಶೂಟಿಂಗ್ ಪಿಸ್ತೂಲ್ ವಿಭಾಗದಲ್ಲೇ ಎರಡು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್ ಅವರು ದಾಖಲೆಯ ಮೂರನೇ ಪದಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ . ಹೀಗೆ ಅಂತಿಮ ಘಟ್ಟದಲ್ಲಿ ಅಂದರೆ, ನಾಲ್ಕನೇ ಸ್ಥಾನದಲ್ಲೇ ಹಲವು ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದು, ಭಾರತೀಯ ಕ್ರೀಡಾಪಟುಗಳಿಗೆ ಹಾರ್ಟ್‌ಬ್ರೇಕ್ ನೀಡಿದ್ದಂತೂ ಸತ್ಯ.
ಆದರೆ, ಕಾಕತಾಳೀಯವೋ ಅಥವಾ ಅತ್ಯಂತ ಕಠಿಣ ಪರಿಶ್ರಮದ ಫಲವೋ ಎನ್ನುವಂತೆ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾದ ನೋವನ್ನು ಭಾರತದ ಪ್ಯಾರಾಲಿಂಪಿಕ್ ಕ್ರೀಡಾಳುಗಳು ಮರೆಸಿದ್ದಾರೆ. ಹೌದು. ಭಾರತದ ಪ್ಯಾರಾಲಿಂಪಿಕ್ಸ್ (Paris Paralympics 2024) ಇತಿಹಾಸದಲ್ಲೇ ಅತ್ಯಧಿಕ 29 ಪದಕಗಳನ್ನುಗೆದ್ದು ತರುವ ಮೂಲಕ ಭಾರತದ ಕೀರ್ತಿ ಹೆಚ್ಚಿಸಿ, ಇಡೀ ಕ್ರೀಡಾ ಜಗತ್ತೇ ಬೆರಗಾಗುವಂತೆ ಸಾಧನೆ ಮಾಡಿದ್ದು ಭಾರತದ ಹೆಮ್ಮೆಯ ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳು. ವಿಕಲತೆಯನ್ನು ಮೆಟ್ಟಿ ನಿಂತು, ಕೈ ಕಾಲು ಊನ, ದೃಷ್ಟಿದೋಷ, ಕುಬ್ಜತೆ ಮುಂತಾದ ಎಲ್ಲಾ ಮಾದರಿಯ ಅಂಗವೈಕಲ್ಯತೆಗಳನ್ನು ಮೆಟ್ಟಿ ನಿಂತು, ದೇಶಕ್ಕೆ ಅತೀ ಹೆಚ್ಚು ಪದಕಗಳನ್ನು ಗೆದ್ದು ತಂದ ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳ ಸಾಧನೆ ನಿಜಕ್ಕೂ ಅವರ್ಣನೀಯ.
ಒಟ್ಟು ಏಳು ಚಿನ್ನದ ಪದಕಗಳು, 9 ಬೆಳ್ಳಿಯ ಪದಕಗಳು ಹಾಗೂ 13 ಕಂಚಿನ ಪದಕಗಳನ್ನು ಗೆಲ್ಲುವುದರೊಂದಿಗೆ ಪದಕಪಟ್ಟಿಯಲ್ಲಿ 18 ನೇ ಸ್ಥಾನ ಪಡೆದು ಈ ಬಾರಿಯ ಪ್ಯಾರಾಲಿಂಪಿಕ್ಸ್ (Paris Paralympics 2024) ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಹಾಗಿದ್ದರೆ, ಈ ಬಾರಿ ಪದಕಗಳನ್ನು ಗೆದ್ದ ಸಾಧಕರು ಯಾರ್‌ಯಾರು ಎನ್ನುವುದನ್ನು ನೋಡೋಣ ಬನ್ನಿ.
Paris Paralympics 2024 ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರ ಪಟ್ಟಿ ಇಲ್ಲಿದೆ.
ಚಿನ್ನ:
- ಅವನಿ ಲೇಖರಾ – ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್ ಸ್ಟಾಂಡಿಂಗ್ ಎಸ್.ಹೆಚ್.1
- ನಿತೇಶ್ ಕುಮಾರ್ – ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಎಲ್-3
- ಸುಮಿತ್ ಅಂತಿಲ್ – ಪುರುಷರ ಜಾವೆಲಿನ್ ಥ್ರೋ ಎಫ್-64
- ಹರ್ವಿಂದರ್ ಸಿಂಗ್ – ಪುರುಷರ ವೈಯುಕ್ತಿಕ ರಿಕರ್ವ್ ಓಪನ್ ಅರ್ಚರಿ
- ಧರಂಬೀರ್ ನೈನ್ – ಪುರುಷರ ಕ್ಲಬ್ ಥ್ರೋ ಎಫ್-51
- ಪ್ರವೀಣ್ ಕುಮಾರ್ – ಪುರುಷರ ಹೈ ಜಂಪ್ ಟಿ-64
- ನವದೀಪ್ ಸಿಂಗ್ – ಪುರುಷರ ಜಾವೆಲಿನ್ ಥ್ರೋ – ಎಫ್-41
ಬೆಳ್ಳಿ:
- ಮನೀಶ್ ನರ್ವಾಲ್ – ಪುರುಷರ 10 ಮೀ ಪಿ1 ಏರ್ ಪಿಸ್ತೂಲ್ ಎಸ್.ಹೆಚ್.1
- ನಿಷಾದ್ ಕುಮಾರ್ – ಪುರುಷರ ಹೈ ಜಂಪ್ ಟಿ-47
- ಯೋಗೇಶ್ ಕಥುನಿಯಾ – ಪುರುಷರ ಡಿಸ್ಕಸ್ ಥ್ರೋ ಎಫ್-56
- ತುಳಸಿಮತಿ ಮುರುಗೇಶನ್ – ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಯು-5
- ಸುಹಾಸ್ ಯತಿರಾಜ್ – ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಎಲ್-4
- ಅಜೀತ್ ಸಿಂಗ್ ಯಾದವ್ – ಪುರುಷರ ಜಾವೆಲಿನ್ ಥ್ರೋ ಎಫ್-46
- ಶರದ್ ಕುಮಾರ್ – ಪುರುಷರ ಹೈ ಜಂಪ್ ಟಿ-63
- ಸಚಿನ್ ಖಿಲಾರಿ – ಪುರುಷರ ಶಾಟ್ ಪುಟ್ – ಎಫ್-46
- ಪ್ರಣವ್ ಸೂರ್ಮಾ – ಪುರುಷರ ಕ್ಲಬ್ ಥ್ರೋ ಎಫ್-51
ಕಂಚು:
- ಮೋನಾ ಅಗರ್ವಾಲ್ – ಮಹಿಳೆಯರ 10 ಮೀ ಆರ್-2 ಏರ್ ರೈಫಲ್ ಸ್ಟಾಂಡಿಂಗ್ ಎಸ್.ಹೆಚ್-1
- ಪ್ರೀತಿ ಪಾಲ್ – ಮಹಿಳೆಯರ 100 ಮೀ ಟಿ-35 ಓಟ
- ರುಬಿನಾ ಫ್ರಾನ್ಸಿಸ್ – ಮಹಿಳೆಯರ 10 ಮೀ ಪಿ2 ಏರ್ ಪಿಸ್ತೂಲ್ ಎಸ್.ಹೆಚ್-1
- ಪ್ರೀತಿ ಪಾಲ್ – ಮಹಿಳೆಯರ 200 ಮೀ ಟಿ-35 ಓಟ
- ಮನಿಷಾ ರಾಮದಾಸ್ – ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಯು-5
- ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ – ಮಿಕ್ಸೆಡ್ ಟೀಂ ಕಾಂಪೌಂಡ್ ಅರ್ಚರಿ
- ನಿತ್ಯಾ ಶಿವನ್ – ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಹೆಚ್-6
- ದೀಪ್ತಿ ಜೀವಾಂಜಿ – ಮಹಿಳೆಯರ 400 ಮೀ ಟಿ20 ಓಟ
- ಮರಿಯಪ್ಪನ್ ತಂಗವೇಲು – ಪುರುಷರ ಹೈ ಜಂಪ್ ಟಿ-63
- ಸುಂದರ್ ಸಿಂಗ್ ಗುರ್ಜಾರ್ – ಪುರುಷರ ಜಾವೆಲಿನ್ ಥ್ರೋ ಎಫ್-46
- ಕಪಿಲ್ ಪರ್ಮಾರ್ – ಪುರುಷರ ಜೆ-1 60 ಕೆ.ಜಿ ಜೋಡೋ
- ಹೊಕಾಟೊ ಹೊಜೊಜೆ ಸೆಮಾ – ಪುರುಷರ ಶಾಟ್‌ಪುಟ್ ಎಫ್-57
- ಸಿಮ್ರನ್ ಶರ್ಮಾ – ಮಹಿಳೆಯರ 200 ಮೀ ಟಿ 12 ಓಟ.
ಪದಕದ ರೇಸ್‌ನಲ್ಲಿದ್ದಿದ್ದು 84 ಸ್ಪರ್ಧಿಗಳು
ಭಾರತವನ್ನು ಪ್ರತಿನಿಧಿಸಿ ವಿವಿಧ ವಿಭಾಗಗಳಲ್ಲಿ ಒಟ್ಟು 84 ಸ್ಪರ್ಧಿಗಳು ಭಾಗವಹಿಸಿದ್ದು, 12 ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 74 ಸ್ಪರ್ಧಿಗಳು ಪದಕದ ರೇಸ್‌ನಲ್ಲಿದ್ದದ್ದಲ್ಲದೇ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅತ್ಯಂತ ರೋಚಕ ಪ್ರದರ್ಶನವನ್ನು ನೀಡಿದ್ದು, ಕ್ರೀಡಾಭಿಮಾನಿಗಳಿಗೆ ಹೆಚ್ಚಿನ ಸಮಾಧಾನ ನೀಡಿದೆ.
ಕ್ರೀಡಾಜಗತ್ತನ್ನು ಮೆಚ್ಚಿಸಿದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್
ವಿಶೇಷವೆಂದರೆ, ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್.ಎಲ್-4 ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದ ಸುಹಾಸ್ ಯತಿರಾಜ್ ಅವರು ವೃತ್ತಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆದ್ದಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೇ, ಮಿಕ್ಸೆಡ್ ಟೀಂ ಕಾಂಪೌಂಡ್ ಅರ್ಚರಿಯಲ್ಲಿ ಕಂಚಿನ ಪದಕ ಗೆದ್ದಿದ್ದಲ್ಲದೇ, ಸಿಂಗಲ್ಸ್ ಅರ್ಚರಿಯಲ್ಲಿ ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡ, ಎರಡೂ ಕೈಗಳಿಲ್ಲದ ಕೇವಲ 17 ವರ್ಷದ ಶೀತಲ್ ದೇವಿ ಅವರ ಸಾಧನೆ ಇಡೀ ಕ್ರೀಡಾಜಗತ್ತನ್ನೇ ಬೆರಗುಗೊಳಿಸಿತ್ತು. ಅವರೊಂದಿಗೆ ಮಿಕ್ಸೆಡ್ ಟೀಂನಲ್ಲಿ ಸ್ಪರ್ಧಿಸಿದ್ದ ರಾಕೇಶ್ ಕುಮಾರ್ ಅವರು, ಸ್ಪರ್ಧಿಸಿದ ಕ್ರೀಡಾಪಟುಗಳಲ್ಲೇ ಅತ್ಯಂತ ಹಿರಿಯರಾಗಿದ್ದರೂ ಕೂಡ, ಕಂಚನ್ನು ಗೆದ್ದಿದ್ದಲ್ಲದೇ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿದ್ದಾರೆ.
ಅದೇನೇ ಇರಲಿ. ಈ ಬಾರಿಯ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಅಭೂತಪೂರ್ವ ಸಾಧನೆ ಮಾಡಿದ ಭಾರತೀಯ ಪ್ಯಾರಾ ಕ್ರೀಡಾಪಟುಗಳನ್ನು ನಿಜಕ್ಕೂ ಮೆಚ್ಚಲೇಬೇಕು ಹಾಗೂ ಅಂಗವಿಕಲತೆಯನ್ನು ಮೆಟ್ಟಿ ನಿಲ್ಲುವಂತೆ ನಮ್ಮೆಲ್ಲರ ಸುತ್ತಮುತ್ತಲಿನ ವಿಕಲಚೇತನರಿಗೆ ಈ ಮಹಾನ್ ಸಾಧನೆಗಳು ಪ್ರೇರಣೆಯಾಗಬೇಕು.