ದೇಶದಾದ್ಯಂತ ಗಣೇಶ ಚತುರ್ಥಿ(Ganesh Chaturthi) ಯನ್ನು ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಗಣೇಶ ದೇವಾಲಯ (Ganesh Temple) ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿಯಂದು ಗಣಪತಿಯನ್ನು ಕೂರಿಸಿ ಪೂಜಿಸುವ ಆಚರಣೆ ಬಹು ವಿಸ್ತಾರವಾಗಿದೆ.
ಗೌರಿಮಾತೆ ಹಾಗೂ ಪರಶಿವನ ಪುತ್ರ ಗಣೇಶನು ವಿಘ್ನನಿವಾರಕನಾಗಿ, ಬುದ್ಧಿವಂತಿಕೆಯ ಅಧಿಪತಿಯಾಗಿ ಹಾಗೂ ಪ್ರಥಮವಂದ್ಯನಾಗಿ ಜನಮಾನಸದಲ್ಲಿ ಬೇರೂರಿದ್ದಾನೆ. ಗಜಾನನನ ಹುಟ್ಟಿನಿಂದ ಹಿಡಿದು ಗಣಪತಿಗೆ ಆನೆ ತಲೆ, ಹೊಟ್ಟೆಗೆ ಹಾವಿನ ಗಂಟು ಸೇರಿದಂತೆ ನೂರಾರು ಪವಾಡಗಳ ಮಾತುಗಳಿವೆ. ಇಂತಹ ಭೂಪತಿಯು ದೇಶಾದ್ಯಂತ ಲಕ್ಷಾಂತರ ದೇವಾಲಯಗಳಲ್ಲಿ ನೆಲೆಸಿ ಆರಾಧನೆಗೆ ಒಳಗಾಗುತ್ತಿದ್ದಾನೆ. ಈ ದೇವಾಲಯಗಳಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದ ಹಲವು ವಿಶೇಷತೆಗಳನ್ನೊಳಗೊಂಡ ದೇಶದ ಅತಿ ಪ್ರಮುಖ 10 ಗಣೇಶನ ದೇವಾಲಯಗಳ (Ganesh Temple) ಪಟ್ಟಿಯನ್ನು ನೋಡೋಣ ಬನ್ನಿ.
1. ಶ್ರೀ ಲಕ್ಷ್ಮಿ ಗಣಪತಿ ದೇವಸ್ಥಾನ (Shri Lakshmi Ganesh Temple) ಬಿಕ್ಕವೋಲು.
ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಬಿಕ್ಕವೋಲು ಗ್ರಾಮದಲ್ಲಿ ಉದ್ಭವ ವಿನಾಯಕ ದೇವಸ್ಥಾನವಿದೆ. ಈ ದೇವಸ್ಥಾನವನ್ನು 9-10ನೇ ಶತಮಾನದಲ್ಲಿ ಚಾಳುಕ್ಯರು ನಿರ್ಮಾಣ ಮಾಡಿದ್ದಾರೆ. ಈ ದೇವಸ್ಥಾನದಲ್ಲಿ ಗಣೇಶನ ಕಲ್ಲಿನ ವಿಗ್ರಹ 7 ಅಡಿ ಇದ್ದು, ಪ್ರತಿ ವರ್ಷವೂ ಕ್ರಮೇಣವಾಗಿ ಗಾತ್ರದಲ್ಲಿ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
2. ಸಿದ್ಧಿವಿನಾಯಕ ಮಂದಿರ, ಮುಂಬೈ.
ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ದೇವಸ್ಥಾನದಲ್ಲಿನ ಗಣೇಶನ ವಿಗ್ರಹವು ಹೆಚ್ಚಿನ ವೈಶಿಷ್ಟ್ಯ ಹೊಂದಿದ್ದು, ಮೂರ್ತಿಯನ್ನು ಏಕಶಿಲಾ ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ಮೂರ್ತಿಯ ಕಾಂಡವನ್ನು ಬಲಕ್ಕೆ ಬಾಗಿಸಿ, ಅಪರೂಪದ ಮತ್ತು ಶಕ್ತಿಯುತ ರೂಪವನ್ನು ನೀಡಲಾಗಿದೆ. ದೇವಸ್ಥಾನದ ಒಳಗಡೆ ಮಂದಿರದ ಚಿನ್ನದ ಛಾವಣಿಯು ಸ್ವರ್ಣ ಲೇಪಿತವಾಗಿದ್ದು, ಸಮೃದ್ಧಿಯ ಪ್ರತೀಕವಾಗಿದೆ.
3. ದಗ್ದುಶೇತ್ ಹಲ್ವಾಯಿ ಗಣೇಶ ದೇವಸ್ಥಾನ (Dagdusheth Halwayi Ganesh Temple), ಪುಣೆ.
ದಗ್ದುಶೇತ್ ಹಲ್ವಾಯಿ ಗಣೇಶ ದೇವಸ್ಥಾನ (Ganesh Temple)ವು ದೇಶದಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಸ್ಥಾನಕ್ಕೆ 100 ವರ್ಷಗಳಷ್ಟು ಇತಿಹಾಸವಿದ್ದು, ಸಿಹಿ ತಯಾರಕ ವ್ಯಾಪಾರಿಗಳು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇಂದು ಪ್ರತಿವರ್ಷ 1 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು ಈ ಗಣೇಶನ ದರ್ಶನ ಪಡೆಯುತ್ತಾರೆ. ಗಣೇಶ ಚೌತಿಯ ಸಂದರ್ಭದಲ್ಲಿ ವಿನಾಯಕ ವಿಗ್ರಹಕ್ಕೆ ಸರಿಸುಮಾರು 40 ಕೆಜಿ ಚಿನ್ನದಿಂದ ಅಲಂಕರಿಸಲಾಗುತ್ತದೆ. ಈ ದೇವಸ್ಥಾನದ ಟ್ರಸ್ಟ್ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ವೃದ್ಧಾಶ್ರಮ ಹಾಗೂ ಅನಾಥ ಮಕ್ಕಳ ಆಶ್ರಮಗಳನ್ನು ನಡೆಸುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ಉಚಿತ ಶಿಕ್ಷಣ ನೀಡುವ ಅಪರೂಪದ ಕೆಲಸ ಮಾಡುತ್ತಿದೆ. ಈ ದೇವಸ್ಥಾನದ ಆವರಣದಲ್ಲಿ ಹಲವು ವರ್ಷಗಳ ಹಿಂದೆ ಬಾಂಬ್ ಹಾಕಲಾಗಿತ್ತು, ಅದೃಷ್ಟವಶಾತ್ ಈ ಬಾಂಬ್ ಸ್ಪೋಟಗೊಂಡಿರುವುದಿಲ್ಲ.
4. ತ್ರಿನೇತ್ರ ಗಣೇಶ ಮಂದಿರ (Trinetra Ganesh Temple), ರಣಥಂಬೋರ್.
ರಾಜಸ್ಥಾನದ ರಣಥಂಬೋರ್ ನಲ್ಲಿರುವ ತ್ರಿನೇತ್ರ ದೇವಸ್ಥಾನವು ಅಪಾರ ಭಕ್ತರನ್ನು ಹೊಂದಿದೆ. ಇಲ್ಲಿ ಗಣೇಶನು ಕುಟುಂಬದೊಂದಿಗೆ ಇರುವುದು ವಿಶೇಷವಾಗಿದೆ. ಈ ದೇವಸ್ಥಾನವು ಕೋಟೆಯ ಒಳಗಡೆ ಇದ್ದು, ಭಕ್ತರು ದೇವರ ಆಶೀರ್ವಾದಕ್ಕೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಇಲ್ಲಿಗೆ ಕಳುಹಿಸುವುದಕ್ಕೆ ಈ ದೇವಸ್ಥಾನ ಹೆಸರುವಾಸಿಯಾಗಿದೆ.
5. ಗಣಪತಿಪುಲೆ ಮಂದಿರ, ರತ್ನಗಿರಿ.
ತಮಿಳುನಾಡಿನ ರತ್ನಗಿರಿ ಜಿಲ್ಲೆಯಲ್ಲಿರುವ ಗಣಪತಿಪುಲೆ ದೇವಸ್ಥಾನವು ಆ ರಾಜ್ಯದಲ್ಲಿಯೇ ಹೆಚ್ಚು ಪ್ರಸಿದ್ಧ ಪಡೆದ ದೇವಾಲಯ. ಈ ದೇವಾಲಯದಲ್ಲಿ ಭಗವಾನ್ ಶ್ರೀ ಗಣೇಶನು ಏಕಶಿಲೆಯಲ್ಲಿ ಸ್ವಯಂ ಉದ್ಭವಿಸಿದ್ದಾನೆ ಎಂದು ನಂಬಲಾಗುತ್ತದೆ. ವಿಗ್ರಹವು ಸಮುದ್ರದೆಡೆಗೆ ಮುಖಮಾಡಿದ್ದು, ಸಮುದ್ರ ತೀರದ ಪ್ರಶಾಂತ ಸೌಂದರ್ಯದೊಂದಿಗೆ ಆಧ್ಯಾತ್ಮಿಕತೆಯನ್ನು ಬೆಸೆಯುತ್ತದೆ.
6. ರಾಕ್‌ಫೋರ್ಟ್ ಉಚ್ಚಿ ಪಿಳ್ಳ್ಯಾರ್ ಮಂದಿರ, ತಿರುಚಿರಾಪಳ್ಳಿ.
ತಿರುಚರಾಪಳ್ಳಿಯಲ್ಲಿರುವ ಗಣೇಶ ದೇವಸ್ಥಾನ (Ganesh Temple)ವು ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ದಂತ ಕಥೆಯನ್ನು ಹೊಂದಿದೆ. ಈ ದಂತಕಥೆಯ ಪ್ರಕಾರ, ಭಗವಾನ್ ಗಣೇಶನು ವಿಭೀಷಣನನ್ನು ಮೋಸಗೊಳಿಸಿದ ಸ್ಥಳವಾಗಿದೆ. ಬೃಹತ್ ಕಲ್ಲಿನ ಬೆಟ್ಟದ ಮೇಲಿರುವ ಮಂದಿರವು 7 ನೇ ಶತಮಾನದಷ್ಟು ಹಿಂದಿನದಾಗಿದೆ.
7. ಕಾಣಿಪಾಕಂ ವಿನಾಯಕ ಮಂದಿರ, ಆಂಧ್ರಪ್ರದೇಶ.
ಆಂಧ್ರಪ್ರದೇಶದ ಕಾಣಿಪಾಕಂ ವಿನಾಯಕ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಹೊಂದಿದ್ದ ದೇವಸ್ಥಾನವಾಗಿದ್ದು, ಪರಿಶುದ್ಧತೆಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದಲ್ಲಿರುವ ಗಣೇಶನ ಮೂರ್ತಿಯು ಗಾತ್ರದಲ್ಲಿ ಬೆಳೆಯುತ್ತದೆ ಎಂದು ನಂಬಲಾಗಿದೆ. ವಿಗ್ರಹದ ಸುತ್ತಲೂ ವರ್ಷಪೂರ್ತಿ ಶುದ್ಧ ನೀರು ಹರಿಯುತ್ತದೆ.
8. ಮೋರ್ಗಾಂವ್ ಮಯೂರೇಶ್ವರ ಗಣಪತಿ ಮಂದಿರ, ಮಹಾರಾಷ್ಟ್ರ.
ಈ ದೇವಸ್ಥಾನವನ್ನು ನವಿಲು ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಪ್ರಮುಖ ಅಷ್ಟವಿನಾಯಕ ಮಂದಿರವಾಗಿದೆ. ದಂತಕಥೆಯ ಪ್ರಕಾರ ಗಣೇಶನು ಮಯೂರೇಶ್ವರನಾಗಿ ರಾಕ್ಷಸ ಸಿಂಧುವನ್ನು ವಧಿಸಿದ ಸ್ಥಳವೆಂದು ಹೇಳಲಾಗುತ್ತದೆ.
9. ಕರ್ಪಕ ವಿನಾಯಕ ಮಂದಿರ, ಪಿಳ್ಳ್ಯಾರಪಟ್ಟಿ, ತಮಿಳುನಾಡು.
ಅಪರೂಪದ ಎರಡು ತೋಳುಗಳ ಗಣೇಶ ಮೂರ್ತಿಯನ್ನು ಗುಹೆಯೊಳಗೆ ಕೆತ್ತಲಾಗಿದೆ. ಈ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸಿ ಗಜಾನನನ ಆಶೀರ್ವಾದ ಪಡೆಯುತ್ತಾರೆ.
10. ಇಡಗುಂಜಿ ಮಹಾಗಣಪತಿ ದೇವಸ್ಥಾನ, ಕರ್ನಾಟಕ.
ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿರುವ ಗಣಪತಿ ದೇವಾಲಯವು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಅಲ್ಲದೇ, ವಿವಿಧ ಚಿತ್ರರಂಗಗಳ ಖ್ಯಾತ ನಟರು , ಪ್ರಮುಖ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳೂ ಇಲ್ಲಿನ ಗಣೇಶನ ಆಶೀರ್ವಾದಕ್ಕಾಗಿ ಆಗಮಿಸುತ್ತಾರೆ. ಈ ದೇವಸ್ಥಾನವು 1500 ವರ್ಷಗಳಷ್ಟು ಪುರಾತನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಕಪ್ಪುಶಿಲೆಯಲ್ಲಿದ್ದು, ನಿಂತ ಭಂಗಿಯಲ್ಲಿದೆ.
ಭಾರತದ ಈ ಪ್ರಸಿದ್ಧ ದೇವಾಲಯಗಳಷ್ಟೇ (Ganesh Temple) ಅಲ್ಲದೇ, ಇನ್ನೂ ಹತ್ತಾರು ದೇವಾಲಯಗಳಿವೆ. ಕರ್ನಾಟಕದಲ್ಲಿಯೇ 7ಕ್ಕೂ ಹೆಚ್ಚಿನ ಪ್ರಸಿದ್ಧ ದೇವಾಲಯಗಳಿವೆ. ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ ವಿನಾಯಕನನ್ನು ಸ್ಮರಿಸೋಣ, ನಮಿಸೋಣ.