ಸಾರ್ವಜನಿಕ, ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಾಗಲಿ ಅಥವಾ ಯಾವುದೇ ಉದ್ಯೋಗಗಳಲ್ಲಿ ದುಡಿಯುವ ಹೆಣ್ಣುಮಗಳಾಗಲಿ ಅಥವಾ ಯಾವುದೇ ವಯಸ್ಕ ಹೆಣ್ಣುಮಗಳ ಪ್ರತಿ ತಿಂಗಳು ಮುಟ್ಟಿನ ನೋವು ಹೇಳತೀರದು. ಕೆಲವೊಮ್ಮೆ ವಿಪರೀತ ನೋವಿದ್ದರೂ, ಧಾರಾಕಾರ ಬ್ಲೀಡಿಂಗ್ ಆಗುತ್ತಿದ್ದರೂ ಕೂಡ, ಯಾರಿಗೂ ನೋವು ಹಂಚಿಕೊಳ್ಳದೇ, ಆಕೆ ಕಷ್ಟಪಡುವ ರೀತಿ ನಿಜಕ್ಕೂ ಒಂದು ಸಾಹಸವೇ ಸರಿ. ಅಂತಹ ಹೆಣ್ಣುಮಕ್ಕಳ ನೋವನ್ನರಿತ ಕರ್ನಾಟಕ ಸರ್ಕಾರ, ಅವರಿಗೆ ರಜೆಯ (Menstrual Leave) ಗುಡ್ ನ್ಯೂಸ್ ನೀಡಿದೆ.
ಹೌದು. ಸಿಎಂ ಸಿದ್ದರಾಮಯ್ಯ (Siddaramaiah) ನವರ ನೇತೃತ್ವದ ರಾಜ್ಯ ಕರ್ನಾಟಕ ಸರ್ಕಾರ, ರಾಜ್ಯದ ಎಲ್ಲಾ ವಲಯಗಳಲ್ಲಿ ದುಡಿಯುತ್ತಿರುವ ಹೆಣ್ಣುಮಕ್ಕಳಿಗೆ ವಾರ್ಷಿಕವಾಗಿ ಮುಟ್ಟಿನ ರಜೆ (Menstrual Leave) ಯನ್ನು ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ನಿರ್ಧಾರದ ಕುರಿತು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎಲ್ಲಾ ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದು, ಆ ನಿಟ್ಟಿನಲ್ಲಿ ಈವರೆಗೆ ಯಾವ ಸರ್ಕಾರಗಳೂ ಮುಂದೆ ಬಂದಿರಲಿಲ್ಲ. ಆದರೆ, ಇದೀಗ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ (Santosh Lad) ಅವರು ಈ ಪ್ರಸ್ತಾಪದ ಕುರಿತು ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಈ ಬಗೆಗಿನ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದಿದ್ದಾರೆ. ಈ ಸುದ್ದಿ, ಎಲ್ಲಾ ಮಹಿಳೆಯರಿಗೂ ಭಾರೀ ಸಂತಸವನ್ನುಂಟು ಮಾಡಿದೆ.
Menstrual Leave: ವರ್ಷದಲ್ಲಿ ಎಷ್ಟು ದಿನ ರಜೆ?
ಪ್ರತಿ ತಿಂಗಳು ತಾನು ಋತುಮತಿಯಾದಾಗಲೂ, ತನ್ಮ್ನ ಕುಟುಂಬದ ಜವಾಬ್ದಾರಿಯೋ ಅಥವಾ ಕಂಪನಿ, ಉದ್ಯೋಗದಾತರ ರೂಲ್ಸ್‌ಗಳನ್ನು ಮೀರಲಾಗದೇ, ಅತ್ಯಂತ ತೀಕ್ಷ ವೇದನೆಯಾದ ಮುಟ್ಟಿನ ನೋವನ್ನು ಕೂಡ ಕಟ್ಟಿಕೊಂಡೇ ಕೆಲಸ ನಿರ್ವಹಿಸುವ ಮಹಿಳೆಯರು ಅದೆಷ್ಟೋ ವರ್ಷಗಳಿಂದ ಈ ಮುಟ್ಟಿನ ಸಮಯದಲ್ಲಿ ರಜೆ (Menstrual Leave) ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ, ಯಾವ ಸರ್ಕಾರಗಳೂ ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿರಲಿಲ್ಲ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್ ಅವರು, ಈ ಬಗ್ಗೆ ಮಹತ್ವದ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಮಹಿಳೆಯರಿಗೆ ವಾರ್ಷಿಕವಾಗಿ ವೇತನ ಸಹಿತ 6 ದಿನಗಳ ಮುಟ್ಟಿನ ರಜೆಯನ್ನು ನೀಡಲು ಶೀಘ್ರದಲ್ಲೇ ಆದೇಶ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.
Menstrual Leave: ವರದಿ ನೀಡಲು 16 ಸದಸ್ಯರ ಸಮಿತಿ ರಚಿಸಿದ್ದ ಸರ್ಕಾರ
ಈ ಮುಟ್ಟಿನ ರಜೆಯ ಪ್ರಸ್ತಾಪದ ಬಗ್ಗೆ ಸೂಕ್ತ ಅಧ್ಯಯವನ ವರದಿ ನೀಡುವಂತೆ ರಾಜ್ಯ ಸರ್ಕಾರ ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾದ ಸಪ್ನಾ ಎಸ್ ಅವರ ಅಧ್ಯಕ್ಷತೆಯಲ್ಲಿ 16 ಮಂದಿ ಸದಸ್ಯರ ತಂಡವನ್ನು ರಚಿಸಿ, ಸೂಕ್ತ ವರದಿ ನೀಡುವಂತೆ ಸೂಚಿಸಿತ್ತು. ಈ ವರದಿಯನ್ನು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ನೀಡಿರುವ ಸಪ್ನ ಎಸ್ ಅವರ ತಂಡ, ವಾರ್ಷಿಕವಾಗಿ ವೇತನ ಸಹಿತ ಆರು ದಿನಗಳ ಮುಟ್ಟಿನ ರಜೆ (Menstrual Leave) ನೀಡುವಂತೆ ವರದಿ ನೀಡಿತ್ತು. ಈ ವರದಿ ಪರಿಶೀಲಿಸಿದ ಸಚಿವ ಸಂತೋಷ್ ಲಾಡ್, ಸಮಿತಿಯ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಈ ವರದಿಯನ್ನು ಪರಿಗಣಿಸಿ, ಸರ್ಕಾರದ ಮುಂದೆ ಪ್ರಸ್ತಾಪಿಸುವುದಾಗಿಯೂ, ಹಾಗೂ ಇದು ಅನುಮೋದನೆಯಾದಲ್ಲಿ ಕಾನೂನು ರೀತಿಯಲ್ಲಿ ಜಾರಿಗೊಳಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವೆಷ್ಟು ಎಂಬುದು ತಿಳಿದಿದೆ. ಮಾನಸಿಕವಾಗಿಯೂ, ದೈಹಿಕವಾಗಿಯೂ ಆಕೆಯಲ್ಲಿ ಆಗುವ ಬದಲಾವಣೆಗಳನ್ನು ಆಕೆ ಸಹಿಸಿಕೊಳ್ಳಲು ಯಾವುದೇ ಇತರ ಒತ್ತಡಗಳು ಅಡ್ಡಿಯಾಗದಂತೆ, ಅವರಿಗೆ ವಿಶ್ರಾಂತಿಗಾಗಿ ಆಕೆಗೆ ಕೆಲಸದಿಂದ ರಜೆ ನೀಡಬೇಕು ಎನ್ನುವ ಈ ಪ್ರಸ್ತಾಪ ನಿಜಕ್ಕೂ ಒಪ್ಪತಕ್ಕದ್ದು. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆ ಎನ್ನುವುದು ತಿಳಿದಿದೆ. ಇಂತಹ ಉತ್ತಮ ನಿರ್ಧಾರಗಳಿಂದ ಆಕೆ ಉದ್ಯೋಗಕ್ಕೆ ಬರುವ ಅವಕಾಶ ಹೆಚ್ಚಲಿದೆ. ಶೀಘ್ರದಲ್ಲೇ ಸಪ್ನಾ ಸಮಿತಿಯ ಜತೆ ಸಭೆ ನಡೆಸಿ, ಅನಂತರ ಸಮಿತಿಯ ಶಿಫಾರಸುಗಳನ್ನು ಸಾರ್ವಜನಿಕ, ಖಾಸಗಿ ವಲಯ ಹಾಗೂ ಕಂಪನಿಗಳ ಚರ್ಚೆಗೆ ನೀಡಿ, ನಿರ್ಧಾರ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ವಿದೇಶಗಳಲ್ಲೂ ಇದೆ ಮುಟ್ಟಿನ ರಜೆ!
ಸ್ಪೇನ್, ಇಂಡೋನೇಷಿಯಾ, ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ವಾರ್ಷಿಕ ಮುಟ್ಟಿನ ರಜೆ ನೀಡಲಾಗುತ್ತಿದೆ. ಆದರೆ, ಕೆಲವು ಭಾಗಗಳಲ್ಲಿ ಹಾಗೂ ಕೆಲವು ವರ್ಗಜ ಜನತೆಯಲ್ಲಿ ಈ ಮುಟ್ಟಿನ ರಜೆ ನೀಡುವ ನಿರ್ಧಾರದ ಬಗ್ಗೆ ವಿರೋಧ ಕೂಡ ಇದ್ದೂ, ಮಹಿಳೆಯರಿಗೆ ಉದ್ಯೋಗ ನೀಡಲು ಕಂಪನಿಗಳು ಕಡಿಮೆ ಉತ್ಸುಕತೆ ತೋರುವ ಸಂಭವವೂ ಇದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೂ ಈ ನಿರ್ಧಾರ ಅನ್ವಯ
ಸರ್ಕಾರದ ಈ ಮುಟ್ಟಿನ ರಜೆ (Menstrual Leave) ನೀಡುವ ನಿರ್ಧಾರ ಅನುಮೋದನೆಗೊಂಡಲ್ಲಿ, ಕೇವಲ ಸರ್ಕಾರಿ ಅಥವಾ ಸಾರ್ವಜನಿಕ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರಷ್ಟೇ ಅಲ್ಲದೇ, ಖಾಸಗಿ ವಲಯದಲ್ಲಿ ದುಡಿಯುವ ಪ್ರತಿ ಹೆಣ್ಣುಮಗಳಿಗೂ ಈ ನಿರ್ಧಾರ ಅನ್ವಯವಾಗಲಿದ್ದು, ದುಡಿಯುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳ ಪಾಲಿಗೆ ಅತ್ಯಂತ ಖುಷಿಕೊಡುವ ಮಹತ್ವದ ಹೆಜ್ಜೆಯಾಗಲಿದೆ.
ಅದೇನೇ ಇರಲಿ, ಇಂತಹ ನಿರ್ಧಾರಗಳು ಮಹಿಳೆಯ ಆತ್ಮಸ್ಥೈರ್ಯ ಹಾಗೂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಉತ್ಸುಕತೆಯನ್ನು ಹೆಚ್ಚಿಸುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಕರ್ನಾಟಕದಲ್ಲಿ ಈ ಆದೇಶ ಜಾರಿಯಾದರೆ ಮಹಿಳೆಯರು ಸಂತಸಪಡುವುದಂತೂ ಖಂಡಿತ.