ಇತ್ತೀಚೆಗಷ್ಟೇ ತಾವೆಲ್ಲರೂ ಯೂಟ್ಯೂಬ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ನ್ಯಾಯಾಧೀಶರೊಬ್ಬರು, ಕನ್ನಡದಲ್ಲೇ ತೀರ್ಪು ಹಾಗೂ ವಿವರಗಳನ್ನು ಪ್ರಕಟಿಸುವುದನ್ನೂ ಹಾಗೂ ಅವರ ಸುಸ್ಪಷ್ಟ ವಿವರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿರುವುದನ್ನೂ ನೋಡಿರುತ್ತೀರಿ. ಆದರೆ, ಅದೇ ನ್ಯಾಯಾಧೀಶರ ಮೇಲೆ ಗಂಭೀರ ಆರೋಪ (High Court Judge Controversy) ವೊಂದು ಸುಪ್ರೀಂ ಕೋರ್ಟ್ ಹಾಕಿದ್ದು , ಈ ಜಡ್ಜ್ ವಿರುದ್ಧ ಸ್ವಯಂಪ್ರೇರಿತ ಸು-ಮೊಟೋ ಕೇಸ್ ದಾಖಲಿಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡಿ ಶಾಕ್ ನೀಡಿದೆ.
High Court Judge Controversy: ಹೈಕೋರ್ಟ್ ಜಡ್ಜ್ ಹೇಳಿದ್ದೇನು?
ಹೌದು. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಅತ್ಯಂತ ಅದ್ಭುತವಾಗಿ ಕನ್ನಡದಲ್ಲೇ ವಿವರಣೆ ನೀಡುವ ಹಾಗೂ ವಕೀಲರಿಗೆ ನೀತಿಪಾಠ ಮಾಡುವ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದ್ದವು. ಅದೇ ವಿಡಿಯೋವೊಂದರಲ್ಲಿ, ಆಟೋರಿಕ್ಷಾ ಚಾಲಕರು ಅವರ ಆಟೋದ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಸಂಬಂಧ ಪ್ರಕರಣದಲ್ಲಿ ವಕೀಲರಿಗೆ ವಿವರಣೆ ನೀಡುತ್ತಾ, ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂತಹ ಪ್ರಯತ್ನ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ, ಗೌರಿಪಾಳ್ಯದಂತಹ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಕ್ರಮ ಕೈಗೊಳ್ಳುವುದಿಲ್ಲ. ಅದೊಂದು ಪಾಕಿಸ್ತಾನದಂತೆ ಆಗಿಬಿಟ್ಟಿದೆ ಎನ್ನುವ ಹೇಳಿಕೆ ನೀಡಿದ್ದರು. ಜಡ್ಜ್ ಅವರ ಆ ಹೇಳಿಕೆ (High Court Judge Controversy) ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಮಾಧ್ಯಮ ವರದಿ ಆಧರಿಸಿ ಸುಪ್ರೀಂ ಸು-ಮೋಟೋ ಕೇಸ್
ಸುಪ್ರೀಂ ಕೋರ್ಟ್‌ಗೆ ಮಾಧ್ಯಮಗಳ ವರದಿ ತಲುಪುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಪೀಠ, ಹೈಕೋರ್ಟ್ ಜಡ್ಜ್ ವಿರುದ್ಧ ಸ್ವಯಂಪ್ರೇರಿತ ಸು-ಮೋಟೋ ಕೇಸ್ ದಾಖಲಿಸಿಕೊಂಡಿದೆ. ಸುಪ್ರೀಂ ನ ಸಿಜೆಐ ಚಂದ್ರಚೂಡ್ (CJI Chandrachud), ಜ.ಎಸ್.ಖನ್ನ, ಬಿ.ಆರ್.ಗವಾಯ್, ಎಸ್.ಕಾಂತ್ ಮತ್ತು ಹೆಚ್.ಎಸ್ ರಾಯ್ ಅವರನ್ನೊಳಗೊಂಡ ಪಂಚ ಸದಸ್ಯ ಪೀಠ, ಹೈಕೋರ್ಟ್ ನ ಈ ನ್ಯಾಯಾಧೀಶರ ಹೇಳಿಕೆಯ ಮೇಲಿನ ಸ್ವಯಂಪ್ರೇರಿತ ಕೇಸಿನ ಆಧಾರದಲ್ಲಿ ಚರ್ಚೆ ನಡೆಸುತ್ತಾ, ಸಾಂವಿಧಾನಿಕ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು, ನ್ಯಾಯಾಲಯದಲ್ಲಿ ಅವರ ಹೇಳಿಕೆಗಳಿಗೆ ಅನುಗುಣವಾಗಿ ಸ್ಪಷ್ಟ ಹಾಗೂ ಸಮರ್ಪಕವಾದ ಮಾರ್ಗಸೂಚಿಗಳನ್ನು ರಚಿಸಿ, ಅನುಸರಿಸಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
ಜಡ್ಜ್ ವಿರುದ್ಧ ಸಿಜೆಐ ಹೇಳಿದ್ದು ಹೀಗೆ!
ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ವಿವಾದಾತ್ಮಕ ಕಮೆಂಟ್ ಮೇಲೆ ನಡೆದ ಈ ವಿಚಾರದ ಬಗ್ಗೆ ಮಾಧ್ಯಮಗಳು ನಮ್ಮ ಗಮನವನ್ನು ಸೆಳೆದಿದ್ದು, ಈ ನಿಟ್ಟಿನಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಸೂಚನೆ ಪಡೆದು, ನಂತರ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ನಾವು ಸೂಚಿಸಲಿದ್ದೇವೆ ಎಂದು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಅದರೊಂದಿಗೆ, ಇಂತಹ ಪ್ರಕರಣ ಅಥವಾ ವಿಚಾರಗಳ ಬಗ್ಗೆ ಮಾರ್ಗಸೂಚಿಯನ್ನಷ್ಟೇ ನೀಡಬಹುದು ಎಂದು ಹೇಳಿದೆ.
ಹೈಕೋರ್ಟ್ ಜಡ್ಜ್ ವಿರುದ್ಧ ನೇರ ಕ್ರಮಕ್ಕೆ ಕಾನೂನಿಲ್ಲ!
ಆದರೆ, ಕರ್ನಾಟಕ ಹೈಕೋರ್ಟ್‌ಗೆ ಕೇವಲ ಎರಡು ದಿನಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಸಿಜೆಐ ಚಂದ್ರಚೂಡ್ ಆದೇಶಿಸಿದ್ದಾರೆ. ಎರಡು ದಿನಗಳಲ್ಲಿ ಹೈಕೋರ್ಟ್ ವರದಿಯನ್ನು ಸಲ್ಲಿಸಿದಲ್ಲಿ, ಅದರ ಆಧಾರದಲ್ಲಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿರುವ ಸುಪ್ರೀಂ, ಮುಂದಿನ ವಿಚಾರಣೆಯನ್ನು ಸೆ.25 ರ ಬುಧವಾರಕ್ಕೆ ಮುಂದೂಡಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ಕಾರ್ಯನಿರತ ಜಡ್ಜ್ ವಿರುದ್ಧ ನೇರ ಕ್ರಮಕ್ಕೆ ಯಾವುದೇ ಕಾನೂನುಗಳಿರುವುದಿಲ್ಲ.
ಏನೇ ಆಗಲಿ. ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಹೈಕೋರ್ಟ್ ನ್ಯಾಯಾಧೀಶರ ನಡೆಯನ್ನು ಅಥವಾ ಹೇಳಿಕೆಯನ್ನು ಪ್ರಶ್ನಿಸುವಂತಾಗಿದ್ದು, ನ್ಯಾಯಾಲಯದ ನಿಲುವುಗಳ ವೈಫಲ್ಯತೆಯೇ ಅಥವಾ ವಿವಾದಗಳನ್ನು ಸೃಷ್ಟಿಸುವ ಕೇವಲ ಪ್ರಯತ್ನವೇ ಎನ್ನುವ ಪರ ವಿರೋಧ ಚರ್ಚೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವುದಂತೂ ಸತ್ಯ. ಆದರೆ, ಈ ಬಗ್ಗೆ ಸುಪ್ರೀಂ ತನ್ನ ಸು-ಮೊಟೋ ಕೇಸಿನ ಮೇಲೆ ಯಾವ ನಿರ್ಧಾರ ಅಥವಾ ಮಾರ್ಗಸೂಚಿ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.