Guarantee Schemes: ಆರು ತಿಂಗಳಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಖರ್ಚಾದ ಹಣವೆಷ್ಟು? ಗೃಹಲಕ್ಷ್ಮೀಗೆ ಹೆಚ್ಚು ವ್ಯಯ.
How Much Money Government Spents On Gurantee Schemes In Karnataka

advertisement
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ (Guarantee Schemes) ಅನುಷ್ಠಾನದ ಮೂಲಕ ಭಾರಿ ಸದ್ದು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ 6 ತಿಂಗಳುಗಳು ಕಳೆದಿವೆ. ಸರ್ಕಾರ ಹಂತ ಹಂತವಾಗಿ ಜಾರಿಗೆ ತಂದ 4 ಗ್ಯಾರಂಟಿಗಳಿಗೆ ಈವರೆಗೆ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿ ವೆಚ್ಚ ವ್ಯಯಿಸಿದೆ!
ಮಹಿಳೆಯರಿಗೆಂದೇ ಮಾಡಿದ ಶಕ್ತಿ ಯೋಜನೆಗೆ 2303 ಕೋಟಿ ರೂಪಾಯಿ.
ಕಳೆದ 6 ತಿಂಗಳ ಹಿಂದೆ ತಂದ ಶಕ್ತಿ ಯೋಜನೆಯಡಿ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ಹಾಗಾಗಿ ಈವರೆಗೆ ಒಟ್ಟು 2,303 ಕೋಟಿ ರೂಪಾಯಿಯ ಉಚಿತ ಟಿಕೆಟ್ ಅನ್ನು ಮಹಿಳೆಯರಿಗೆ ವಿತರಿಸಲಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ನುಡಿದಂತೆ ನಡೆಸಿದ್ದೇವೆ. ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಂದು ಪ್ರತಿ ಮನೆ ಮನೆಯಲ್ಲೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕಾಣಬಹುದಾಗಿದೆ. ಹಾಗಾಗಿ ಇತರೆ ರಾಜ್ಯಗಳು ಕೂಡ ನಮ್ಮನ್ನು ಅನುಸರಿಸುತ್ತಿರುವುದು ಹೆಮ್ಮೆ ಮೂಡಿಸಿದೆ. ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳ ನೀಡಿ ಸರ್ವತೋಮುಖ ಪ್ರಗತಿಯ ನಾಡು ಕಟ್ಟುವ ನಮ್ಮ ಕಾರ್ಯಕ್ಕೆ ನಿಮ್ಮ ಬೆಂಬಲವಿರಲಿ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಕೇಳಿಕೊಂಡಿದ್ದಾರೆ.
ಮಹಿಳೆಯರಿಗಾಗಿಯೇ ಹೊರತಂದ ಗೃಹ ಲಕ್ಷ್ಮಿ ಯೋಜನೆಗೆ 11,200 ಕೋಟಿ ರೂಪಾಯಿ.
ಹೆಣ್ಣು ಮನೆಯ ಕಣ್ಣು. ಹಾಗಾಗಿ ಬಿಪಿಎಲ್ ಕುಟುಂಬಗಳ ಯಜಮಾನಿಗೆ ಮಾಸಿಕವಾಗಿ 2,000 ರುಪಾಯಿ ಧನಸಹಾಯ ನೀಡುವ ಯೋಜನೆಗೆ ಈವರೆಗೆ 99.52 ಲಕ್ಷ ಮಹಿಳೆಯರು ನೋಂದಣಿಯಾಗಿದ್ದಾರೆ. ಹಾಗಾಗಿ ಅವರ ಖಾತೆಗೆ ಹಣ ವರ್ಗಾವಣೆಗೆಂದೆ 17,500 ಕೋಟಿ ರುಪಾಯಿ ಅನುದಾನ ಮೀಸಲಿಟ್ಟಿದ್ದು, ಈವರೆಗೆ 11,200 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ತಮ್ಮ ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಮಹಿಳೆಯರಿಗೆ ಬೆಲೆಯೇರಿಕೆಯಿಂದ ತುಸು ನೆಮ್ಮದಿ ನೀಡಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನಾವು ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯನ್ನು ಮಹಿಳೆಯರಿಗೆ ಆತ್ಮವಿಶ್ವಾಸ ಹೆಚ್ಚಿಸಲು ಜಾರಿಗೆ ತಂದು ಮಾಸಿಕವಾಗಿ 2,000 ರೂಪಾಯಿ ಸಹಾಯಧನ ನೀಡುತ್ತಿದ್ದೇವೆ, ಇದು ಮಹಿಳೆಯರ ಬಗ್ಗೆ ನಮಗಿರುವ ಕಾಳಜಿ ಎಂದಿದ್ದಾರೆ.
advertisement
ಮನೆ ಬೆಳಗುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ 2,152 ಕೋಟಿ ರೂಪಾಯಿ.
ಬೆಳಕಿಲ್ಲದೆ ಬದುಕಿಲ್ಲ ಹಾಗಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಕಾಂಗ್ರೇಸ್ ಸರ್ಕಾರ ಘೋಷಿಸಿತ್ತು. ಹಾಗಾಗಿ ಈ ಯೋಜನೆಯನ್ನು ಜಾರಿಗೆ ತಂದಾಗ ಒಟ್ಟು 1.56 ಕೋಟಿ ಕುಟುಂಬಗಳು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಈ ಯೋಜನೆಗೆ ಕಳೆದ 3 ತಿಂಗಳ ಅವಧಿಯಲ್ಲಿ ಕಾಂಗ್ರೇಸ್ ಸರ್ಕಾರವು 2,152 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ಜಾರಿಗೆ ತಂದ ಗೃಹಜ್ಯೋತಿ ಯೋಜನೆ (Gruhajyoti Scheme) ಪ್ರತಿ ಮನೆಯನ್ನು ಬೆಳಗುತ್ತಿದೆ.
ಬಡವರು ನಿರ್ಗತಿಕರಿಗೆ ಅನ್ನಭಾಗ್ಯ ಯೋಜನೆ 2444 ಕೋಟಿ ರೂಪಾಯಿ .
ಭಾರತಕ್ಕೆ ಸ್ವಾತಂತ್ರ ಬಂದು ಬಹಳಷ್ಟು ವರ್ಷಗಳೇ ಕಳೆದಿದ್ದರೂ ಇನ್ನು ಇಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬಡತನ ಮತ್ತು ಹಸಿವು ಇಂದಿನ ಸಮಾಜವನ್ನು ಬಾಧಿಸುತ್ತಿರುವ ಮಾರಕ ರೋಗಗಳು. ನಾಡಿನ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ (Annabhagya Scheme) ಯಡಿ ಬಡಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಲಾಗಿತ್ತು. ಆದರೆ 5 ಕೆ.ಜಿ ಹೆಚ್ಚುವರಿ ಅಕ್ಕಿ ಲಭ್ಯವಿಲ್ಲದೇ ಇರುವುದರಿಂದ ಅಕ್ಕಿಯ ಬದಲಾಗಿ 170 ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಕಾಂಗ್ರೇಸ್ ಸರ್ಕಾರ ಒಟ್ಟು 2,444 ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಿದೆ.ಈವರೆಗೂ ಒಟ್ಟೂ 3.92 ಕೋಟಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದೆ ಎಂದು ಸರ್ಕಾರ ತಿಳಿಸಿದೆ.
Advertisement